
ಕೋವಿಡ್ ಪರೀಕ್ಷೆಯಿಲ್ಲದೆ ಒಂದೇ ಒಂದು ಮೀನು ಅಥವಾ ಇತರ ಸಮುದ್ರಾಹಾರವನ್ನು ದೇಶಕ್ಕೆ ಪ್ರವೇಶಿಸಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸದ್ಯ ಮೀನುಗಳು ಮತ್ತು ಏಡಿಗಳಿಗೆ ನಡೆಸುತ್ತಿರುವ ಕೊರೊನಾ ಪರೀಕ್ಷೆಯ ವಿಡಿಯೋ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಚೀನಾದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗಲು ಪ್ರಾರಂಭಿಸಿದ್ದು ಹೀಗಾಗಿ ಚೀನಾ ಮೀನು ಮತ್ತು ಏಡಿಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ನವೆಂಬರ್-ಡಿಸೆಂಬರ್ 2019 ರಿಂದ ಚೀನಾದಲ್ಲಿ ಕೋವಿಡ್ ಪ್ರಾರಂಭವಾಯಿತು ಮತ್ತು ಅಲ್ಲಿಂದ ಪ್ರಪಂಚದಾದ್ಯಂತ ಕೊರೊನಾ ವ್ಯಾಪಿಸಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದು ಯಾರು ತಾನೇ ಮರೆಯೋಕೆ ಸಾಧ್ಯ. ಈಗ ಕೊರೊನಾ ಮತ್ತೆ ವಕ್ಕರಿಸಿಕೊಂಡಿದ್ದು ಈ ಬಾರಿ ಪರಿಸ್ಥಿತಿ ಹೇಗಿದೆಯಂದರೆ, ಈಗ ಅಲ್ಲಿನ ಸರ್ಕಾರ ಸಮುದ್ರದಿಂದ ಬರುವ ಎಲ್ಲಾ ಮೀನು ಮತ್ತು ಏಡಿಗಳ ಕೋವಿಡ್ ಪರೀಕ್ಷೆಗೆ ಆದೇಶ ಹೊರಡಿಸಲಾಗಿದೆ.
ಚೀನಾದಲ್ಲಿ ದೊಡ್ಡ ಪ್ರಮಾಣದ ವ್ಯಾಕ್ಸಿನೇಷನ್ ತಯಾರಿಸಲಾಗಿದೆ. ಆದರೆ, ಇತ್ತೀಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅದು ಅಂತಹ ಅನಿರೀಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಬಿಬಿಸಿ ಪ್ರಕಾರ, ಚೀನಾದ ಕ್ಸಿಯಾಮೆನ್ನಲ್ಲಿನ 5 ಮಿಲಿಯನ್ಗಿಂತಲೂ ಹೆಚ್ಚು ಜನರಿಗೆ ಪರೀಕ್ಷೆಗೆ ಒಳಗಾಗಲು ಸೂಚಿಸಲಾಗಿದೆ. ಆದರೆ, ಮನುಷ್ಯರ ಜೊತೆಗೆ ಸಮುದ್ರ ಮೀನು ಮತ್ತು ಏಡಿಗಳಿಗೂ ಕೊರೊನಾ ಪರೀಕ್ಷೆ ಮಾಡುತ್ತಿರುವುದನ್ನು ಕೇಳಿದ ಜನ ಶಾಕ್ ಆಗಿದ್ದಾರೆ.
ಸೌತ್-ಚೀನಾ ಮಾರ್ನಿಂಗ್ ಪೋಸ್ಟ್ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್ ವೈರಸ್ ಸೋಂಕಿಗೆ ಒಳಗಾಗಿರುವ ಶಂಕಿತ ಸಮುದ್ರಾಹಾರಿಗಳಾದ ಮೀನು, ಏಡಿಗಳ ಮಾದರಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರು ಸಂಪೂರ್ಣವಾಗಿ ಪಿಪಿಇ ಕಿಟ್ಗಳಲ್ಲಿದ್ದಾರೆ ಮತ್ತು ಮನುಷ್ಯರಂತೆಯೇ ಮೀನುಗಳ ಬಾಯಿಯಿಂದ ಸ್ವ್ಯಾಬ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಏಡಿಗಳ ಚಿಪ್ಪುಗಳ ಮೇಲಿನಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ವಿಡಿಯೋ ಚೀನಾದಾದ್ಯಂತ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಆಗಿರೋ ಈ ವಿಡಿಯೋವನ್ನ 2 ಲಕ್ಷ ಜನರು ವೀಕ್ಷಿಸಿದ್ದಾರೆ. ಚೀನಾ ಸರ್ಕಾರದ ಈ ನಡೆಯನ್ನ ಕೆಲವರು ಖಂಡಿಸಿದರೆ ಇನ್ನೂ ಕೆಲವರು ಬೆಂಬಲಿಸುತ್ತಿದ್ದಾರೆ. ಓರ್ವ ನೆಟ್ಟಿಗ ಈ ವೈರಲ್ ವಿಡಿಯೋ ನೋಡಿ “ವಿಚಿತ್ರ ಅನಿಸುತ್ತಿದೆ, ಆದರೆ ಬೇರೆ ಮಾರ್ಗವೇ ಇಲ್ಲ. ಪ್ರಾಣಿಯಿಂದ ಮಾನವ ಮತ್ತು ಮಾನವನಿಂದ ಮಾನವರಿಗೆ ವೈರಸ್ ಹರಡುತ್ತಿರುವುದು ಎಲ್ಲರಿಗೂ ಗೊತ್ತು. ಸಮುದ್ರ ಜೀವಿಗಳಿಂದಲೂ ಕೊರೊನಾ ಹರಡುವ ಸಾಧ್ಯತೆ ಇದೆ. ಇದು ವಿಚಿತ್ರ ಅಂತ ಅನಿಸಿದರೂ ಅನಿವಾರ್ಯವಾಗಿದೆ. ಚೀನಾ ಸರ್ಕಾರ ಈ ರೀತಿ ಪರೀಕ್ಷೆ ಮಾಡಿಸುತ್ತಿರುವುದು ಒಳ್ಳೆಯ ವಿಚಾರ.” ಎಂದಿದ್ದಾರೆ.