ಪಂಜಾಬ್: ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯ ಪ್ರಮುಖ ಆರೋಪಿ ಗೋಲ್ಡಿ ಬ್ರಾರ್ ಮಾತನಾಡಿದ್ದಾನೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದ್ದು, ಇದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ಗೆ ಭಾರಿ ಮುಖಭಂಗ ಮಾಡುವಂತಿದೆ.
ಗೋಲ್ಡಿ ಬ್ರಾರ್ನನ್ನು ಅಮೆರಿಕದ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾನ್ ಹೇಳಿದ್ದರು. ತಾವು ಇದನ್ನು ದೃಢೀಕರಿಸುವುದಾಗಿಯೂ ಪತ್ರಕರ್ತರಿಗೆ ಮಾನ್ ಹೇಳಿಕೆ ನೀಡಿದ್ದರು. ಬ್ರಾರ್ ಅಮೆರಿಕಕ್ಕೆ ಓಡಿ ಹೋಗಿದ್ದ. ಅಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಮಾನ್ ಹೇಳಿದ್ದರು. ಆದರೆ ಈ ಸಂದರ್ಶನದಲ್ಲಿ ಅದನ್ನು ಗೋಲ್ಡಿ ಬ್ರಾರ್ ಅಲ್ಲಗಳೆದಿದ್ದಾನೆ.
ಅಮೆರಿಕದ ಅಧಿಕಾರಿಗಳು ತನ್ನನ್ನು ಬಂಧಿಸಿರುವುದನ್ನು ಆತ ನಿರಾಕರಿಸಿದ್ದಾನೆ. ಬ್ರಾರ್ ಯೂಟ್ಯೂಬ್ ಒಂದರಲ್ಲಿ ಪತ್ರಕರ್ತರೊಂದಿಗೆ ನಡೆಸಿದ್ದಾನೆ ಎನ್ನಲಾದ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದ್ದು, ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
”ಮುಖ್ಯಮಂತ್ರಿ ನೀಡಿರುವ ಹೇಳಿಕೆ ತಪ್ಪು. ನಾನು ಅಮೆರಿಕದಲ್ಲಿಯೇ ಇಲ್ಲ. ಹಾಗಿದ್ದ ಮೇಲೆ ಅಲ್ಲಿ ಬಂಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಈತ ಹೇಳಿಕೆ ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಮಾನ್ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಜಾ ವಾರಿಂಗ್, ಇದರ ಸತ್ಯ ಹೊರಬರಬೇಕಾಗಿದೆ. ಬ್ರಾರ್ ತನ್ನನ್ನು ಬಂಧಿಸಿಲ್ಲ ಎಂದು ಹೇಳುತ್ತಿರುವುದು ನಿಜವೇ ಆಗಿದ್ದರೆ, ಗುಜರಾತ್ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಗಳು ಚಿಕ್ಕ ಸುಳ್ಳು ಹೇಳಿರುವಂತೆ ಕಾಣಿಸುತ್ತಿದೆ ಎಂದಿದ್ದಾರೆ.