ಪ್ರಪಂಚದಾದ್ಯಂತ ಸಮಾನ ಹಕ್ಕುಗಳ ಬಗ್ಗೆ ಚರ್ಚೆಯಾಗುತ್ತಿದ್ದರೂ ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಿಂದ ಸ್ವಾತಂತ್ರ್ಯ ಪಡೆಯಲು ಮಹಿಳೆಯರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಕೇವಲ ಮಹಿಳೆಯರು ಮಾತ್ರ ಇರುವ ಹಳ್ಳಿಯೊಂದಿದೆ. ಉಮೋಜಾ ಎಂಬ ಈ ಹಳ್ಳಿ ಕೀನ್ಯಾದ ರಾಜಧಾನಿ ನೈರೋಬಿ ಬಳಿಯಿದೆ. ಇದು ಮಹಿಳೆಯರು ಮಾತ್ರ ವಾಸಿಸುವ ಗ್ರಾಮ. ಈ ಗ್ರಾಮದ ವಿಶೇಷತೆ ಏನೆಂದರೆ ಇಲ್ಲಿಗೆ ಪುರುಷರು ಪ್ರವೇಶ ಮಾಡುವಂತಿಲ್ಲ.
ಈ ಗ್ರಾಮಕ್ಕೆ ಪುರುಷರ ಪ್ರವೇಶ ನಿಷೇಧ !
ಇಲ್ಲಿ ಸುಮಾರು 50 ಮಹಿಳೆಯರ ಗುಂಪು ತಮ್ಮ ಮಕ್ಕಳೊಂದಿಗೆ ಒಣಹುಲ್ಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದೆ. ಈ ಗ್ರಾಮಕ್ಕೆ ಒಬ್ಬನೇ ಒಬ್ಬ ಪುರುಷನೂ ಬರುವಂತಿಲ್ಲ. ಯಾವುದೇ ವ್ಯಕ್ತಿ ಇಲ್ಲಿಗೆ ಪ್ರವೇಶಿಸಿದರೆ ಅವರನ್ನು ಸ್ಥಳೀಯ ಪೊಲೀಸರು ಬಂಧಿಸುತ್ತಾರೆ.
1990ರಲ್ಲಿ ಈ ಹಳ್ಳಿಯಲ್ಲಿ 15 ಮಹಿಳೆಯರಿದ್ದರು. ಸಂಬೂರು ಮತ್ತು ಇಸಿಯೊಸೊ ಬಳಿ ಬ್ರಿಟಿಷ್ ಸೈನಿಕರು ಈ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು. ಇಲ್ಲಿ ಬಾಲ್ಯವಿವಾಹ, ಸ್ತ್ರೀ ಜನನಾಂಗ ಊನಗೊಳಿಸುವಿಕೆ, ಕೌಟುಂಬಿಕ ಹಿಂಸೆ ಮತ್ತು ಅತ್ಯಾಚಾರದಂತಹ ದೌರ್ಜನ್ಯ ನಡೆಯುತ್ತಲೇ ಇತ್ತು.
ಬ್ರಿಟಿಷ್ ಸೈನಿಕರ ದುಷ್ಕೃತ್ಯದ ನಂತರ ಈ ಗ್ರಾಮದ ಮಹಿಳೆಯರನ್ನು ಅವರ ಗಂಡಂದಿರು ಅಗೌರವದಿಂದ ಕಾಣಲಾರಂಭಿಸಿದರು. ಅವರನ್ನು ಮನೆಯಿಂದ ಹೊರಹಾಕಿದರು. ಬಳಿಕ ಸಂತ್ರಸ್ಥ ಮಹಿಳೆಯರೆಲ್ಲ ಒಂದೆಡೆ ಸೇರಿ ವಾಸಿಸಲಾರಂಭಿಸಿದರು. ಈ ಗ್ರಾಮಕ್ಕೆ ಉಮೋಜಾ ಎಂದು ಹೆಸರಿಟ್ಟರು, ಇದು ಏಕತೆಯನ್ನು ಸೂಚಿಸುತ್ತದೆ. ಕ್ರಮೇಣ ಈ ಗ್ರಾಮವು ಆಶ್ರಯ ತಾಣವಾಗಿ ಮಾರ್ಪಾಡಾಯಿತು. ಮನೆಯಿಂದ ಹೊರಹಾಕಲ್ಪಟ್ಟ ಎಲ್ಲ ಮಹಿಳೆಯರನ್ನು ಇಲ್ಲಿ ಸ್ವಾಗತಿಸಲಾಗುತ್ತದೆ.
ಉಮೋಜಾದಲ್ಲಿ ವಾಸಿಸುವ ಎಲ್ಲಾ ಮಹಿಳೆಯರು ಸಾಂಬೂರು ಸಂಸ್ಕೃತಿಗೆ ಸೇರಿದವರು. ಈ ಸಮಾಜ ಪಿತೃಪ್ರಧಾನವಾಗಿದ್ದು ಬಹುಪತ್ನಿತ್ವ ಪದ್ಧತಿ ಇದೆ. ಇಲ್ಲಿ ಹೆಚ್ಚಾಗಿ ಸ್ತ್ರೀಯರಿಗೆ ಸುನ್ನತಿ ಮಾಡಲಾಗುತ್ತದೆ. ಎಲ್ಲಾ ವಯಸ್ಸಿನ ಮಹಿಳೆಯರು ಇಲ್ಲಿಗೆ ಬಂದು ವಾಸಿಸಬಹುದು. ಗರ್ಭಿಣಿಯಾದಾಗಲೂ ಅನೇಕ ಮಹಿಳೆಯರು ಇಲ್ಲಿಗೆ ಬಂದು ತಂಗುತ್ತಾರೆ. ಉಮೋಜಾ ಗ್ರಾಮದಲ್ಲಿ ಮಹಿಳೆಯರು ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇಲ್ಲಿ ಅವರು ಯಾವುದೇ ಕೆಲಸಕ್ಕೆ ಅನುಮತಿ ತೆಗೆದುಕೊಳ್ಳಬೇಕಾಗಿಲ್ಲ. ಈ ಗ್ರಾಮದ ಮಹಿಳೆಯರು ಬಣ್ಣಬಣ್ಣದ ಮಣಿಗಳಿಂದ ಮಾಲೆಗಳನ್ನು ಮಾಡುತ್ತಾರೆ, ಇದು ಅವರ ಜೀವನೋಪಾಯದ ಕಾಯಕ.