
ಉತ್ತರ ಕೊರಿಯಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸ್ವತಂತ್ರ ತನಿಖಾಧಿಕಾರಿ ಕೋವಿಡ್ 19ನಿಂದ ಪಾರಾಗಲು ಏಷ್ಯಾದ ರಾಷ್ಟ್ರಗಳು ಜಾಗತಿಕ ಐಸೋಲೇಟ್ ಆಗಿರುವಂತೆ ಈ ಹಿಂದೆ ಎಂದಿಗೂ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಇದು ದೇಶದಲ್ಲಿ ಮಾನವ ಹಕ್ಕುಗಳ ಮೇಲೆ ಅಗಾಧ ಪ್ರಭಾವ ಬೀರಿದೆ ಎಂದೂ ಅವರು ಹೇಳಿದ್ದಾರೆ.
ಉತ್ತರ ಕೊರಿಯಾ ಜನತೆ ಆಹಾರದ ಕೊರತೆ ಹಾಗೂ ದೈನಂದಿನ ಜೀವನದಲ್ಲಿ ಕುಸಿತವನ್ನು ಎದುರಿಸಿದ್ದಾರೆ. ಹಸಿವಿನಿಂದ ಬಳಲಿದ ಪರಿಣಾಮ ಮಕ್ಕಳು ಹಾಗೂ ವೃದ್ಧರು ಅತ್ಯಂತ ದುರ್ಬಲರಾಗಿದ್ದಾರೆ ಎಂದು ಟೊಮೆಸ್ ಒಜಿಯಾ ಕ್ವಿಂಟಾನಾ ಮಾನವ ಹಕ್ಕುಗಳ ಸಮಿತಿಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ.
ಕೋವಿಡ್ 19ನಿಂದ ಪಾರಾಗಬೇಕೆಂಬ ಉದ್ದೇಶದಿಂದ ಉತ್ತರ ಕೊರಿಯಾ ತನ್ನ ಗಡಿಗಳನ್ನು ಬಂದ್ ಮಾಡಿದೆ. ಇಲ್ಲಿನ ಸರ್ಕಾರ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳು ಜನರ ಜೀವನಕ್ಕೆ ಭೀತಿ ತಂದಿದೆ. ದೇಶವನ್ನು ಪ್ರವೇಶಿಸಲು ಅಥವಾ ತೊರೆಯಲು ಯತ್ನಿಸುವವರನ್ನು ಗುಂಡಿಕ್ಕಿ ಕೊಲ್ಲುವ ನೀತಿ ಕೂಡ ಇಲ್ಲಿ ಜಾರಿಯಲ್ಲಿದೆ ಎಂದು ಕ್ವಿಂಟಾನಾ ಹೇಳಿದ್ದಾರೆ.
ಕೊರೊನಾ ವೈರಸ್ ಹರಡದಂತೆ ಗಡಿಗಳನ್ನು ಮುಚ್ಚಿದ ಪರಿಣಾಮ ಜನರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮವನ್ನು ಉಂಟು ಮಾಡಿದೆ. ಮೂಲಸೌಕರ್ಯಗಳ ಸಾಗಾಟ ಇಲ್ಲಿ ಕುಂಠಿತವಾಗಿದೆ. ಇದರಿಂದ ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಉತ್ತರ ಕೊರಿಯಾದ ಕಠಿಣ ಕ್ರಮಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದಿದ್ದಾರೆ.
ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ವಿಶೇಷ ತನಿಖಾಧಿಕಾರಿಯಾಗಿ ವಿಶ್ವಸಂಸ್ಥೆಯಿಂದ ನೇಮಕವಾಗಿ ಆರು ವರ್ಷಗಳ ಬಳಿಕ ಅಸೆಂಬ್ಲಿಗೆ ನೀಡಿದ ಅಂತಿಮ ವರದಿಯಲ್ಲಿ, ದೇಶದ ಗಡಿಯನ್ನು ಬಂದ್ ಮಾಡಿರುವುದು ಮಾರುಕಟ್ಟೆ ಚಟುವಟಿಕೆಗಳನ್ನು ಉಸಿರುಗಟ್ಟಿಸಿದೆ. ಇದರಿಂದ ಆಹಾರ ಸೇರಿದಂತೆ ಸಾಕಷ್ಟು ಮೂಲಭೂತ ಸೌಕರ್ಯಗಳಲ್ಲಿ ಕೊರತೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.