ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಈಗಾಗಲೇ ಹಲವು ಅತಿರೇಕದ ನಿರ್ಧಾರಗಳನ್ನು ಕೈಗೊಂಡು ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿದೆ. ಸ್ವತಃ ಅಲ್ಲಿನ ದೇಶವಾಸಿಗಳಿಗೂ ಸಹ ಸರ್ಕಾರದ ಕೆಲವೊಂದು ತೀರ್ಮಾನಗಳು ರೇಜಿಗೆ ಹುಟ್ಟಿಸಿದ್ದು, ಆದರೆ ಕಠಿಣ ಶಿಕ್ಷೆ ಎದುರಿಸುವ ಭೀತಿಯಿಂದ ಯಾರೂ ಮಾತನಾಡುತ್ತಿಲ್ಲ.
ಇದೀಗ ಉತ್ತರ ಕೊರಿಯ ಸರ್ಕಾರ ಮತ್ತೊಂದು ತೀರ್ಮಾನ ಕೈಗೊಂಡಿದ್ದು, ಅಚ್ಚರಿಯ ಜೊತೆಗೆ ನಗು ತರಿಸುವಂತಿದೆ. ಯುವ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಸಲುವಾಗಿ ಪೋಷಕರು ತಮ್ಮ ಮಕ್ಕಳಿಗೆ ಗನ್, ಬಾಂಬ್, ಸೆಟಲೈಟ್, ನಿಷ್ಠೆ ಈ ತರಹದ ಹೆಸರುಗಳನ್ನು ಇಡಬೇಕೆಂದು ಆದೇಶಿಸಲಾಗಿದೆ.
ಈ ಮೊದಲು A Ri ಮತ್ತು Su Mi ಯಿಂದ ಕೊನೆಯಾಗುವ ಹೆಸರುಗಳನ್ನು ಇಡಬೇಕೆಂದು ತಿಳಿಸಲಾಗಿತ್ತು. ಆದರೆ ಇವುಗಳು ಸೌಮ್ಯವಾಗಿವೆ ಎಂಬ ಕಾರಣಕ್ಕೆ ಮಕ್ಕಳಲ್ಲಿ ಬಾಲ್ಯದಿಂದಲೇ ಮಿಲಿಟರಿ ಗುಣಗಳು ಬರಲಿ ಎಂಬ ಕಾರಣಕ್ಕೆ ಈಗ Chong II (ಗನ್), Chung Sim (ನಿಷ್ಠೆ),, Pok II (ಬಾಂಬ್) ಮೊದಲಾದವುಗಳಿಂದ ಕೊನೆಯಾಗುವಂತೆ ಹೆಸರುಗಳನ್ನು ಇಡಬೇಕಿದೆ.
ಇದರ ಜೊತೆಗೆ ಪೋಷಕರು, ತಮ್ಮ ಮಕ್ಕಳಿಗೆ ಚೈನಿಸ್, ಜಪಾನೀಸ್ ಹಾಗೂ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾಗೆ ಸಂಬಂಧಪಟ್ಟವರಿಗೆ ಇರಬಾರದು ಎಂದು ತಿಳಿಸಲಾಗಿದೆ. ಸರ್ಕಾರದ ಈ ಆದೇಶ ಮಕ್ಕಳ ಪೋಷಕರಲ್ಲಿ ಆಕ್ರೋಶ ಉಂಟು ಮಾಡಿದ್ದು, ಒಳಗೊಳಗೆ ತಮ್ಮ ಸಿಟ್ಟು ಹೊರ ಹಾಕುತ್ತಿದ್ದಾರೆ.