ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಫೋಟಗೊಂಡಿದೆ. ದೇಶದಲ್ಲಿ ಕಳೆದ 4 ದಿನಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಇಂದು 15 ಜನರು ಸಾವನ್ನಪ್ಪಿದ್ದಾರೆ. ಇದುವರೆಗೆ 42 ಜನ ಪ್ರಾಣ ಕಳೆದುಕೊಂಡಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,20,620 ಕ್ಕೆ ಏರಿಕೆಯಾಗಿದೆ. ಉತ್ತರ ಕೊರಿಯಾದಲ್ಲಿ ಗುರುವಾರ ಕೊರೋನಾ ಸಾಂಕ್ರಾಮಿಕದ ಮೊದಲ ಪ್ರಕರಣದ ನಂತರವೇ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಮಾಡಲಾಗಿದೆ.
ಇದುವರೆಗೆ 42 ಜನರು ಸಾವನ್ನಪ್ಪಿದ್ದಾರೆ. 3,24,550 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಕಾಏಕಿ ಉತ್ತರ ಕೊರಿಯಾದಲ್ಲಿ ಕೊರೋನಾ ದೊಡ್ಡ ಕ್ರಾಂತಿ ಉಂಟುಮಾಡಿದೆ ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ದೇಶದ ಎಲ್ಲಾ ಪ್ರಾಂತ್ಯಗಳು, ನಗರಗಳು ಮತ್ತು ಕೌಂಟಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಕಚೇರಿಗಳು, ಕಾರ್ಖಾನೆಗಳು, ಶಾಲೆಗಳು, ಹೋಟೆಲ್ ಗಳು ಸೇರಿದಂತೆ ಎಲ್ಲವನ್ನೂ ಮುಚ್ಚಲಾಗಿದೆ.
ವಿಶ್ವದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ಎರಡು ವರ್ಷಗಳ ನಂತರ ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್ ನಲ್ಲಿ ಗುರುವಾರ ಒಮಿಕ್ರಾನ್ ರೂಪಾಂತರವನ್ನು ಪತ್ತೆ ಮಾಡಲಾಗಿದೆ. ಇದರ ಬೆನ್ನಲ್ಲೇ ಲಾಕ್ ಡೌನ್ ಜಾರಿ ಮಾಡಲಾಗಿದೆ. ಉತ್ತರ ಕೊರಿಯಾದಲ್ಲಿ ಆರೋಗ್ಯ ವ್ಯವಸ್ಥೆ ಅತ್ಯಂತ ಕಳಪೆಯಾಗಿದೆ. COVID ಲಸಿಕೆಗಳು, ಆಂಟಿವೈರಲ್ ಚಿಕಿತ್ಸೆ ಔಷಧಗಳು, ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿಲ್ಲ.