ಉತ್ತರ ಕೊರಿಯಾದಲ್ಲಿ ಕಿಮ್ಜಾಂಗ್ಉನ್ರ ಸರ್ವಾಧಿಕಾರತ್ವ ಹೇಗೆ ಇರುತ್ತೆ ಅನ್ನೋದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇದೆ. ಇದೇ ಸರ್ವಾಧಿಕಾರದ ಮುಂದುವರಿದ ಭಾಗವಾಗಿ ಉತ್ತರ ಕೋರಿಯಾ ಜನತೆಗೆ ಲೆದರ್ ಕೋಟ್ಗಳ ಬಳಕೆಗೆ ನಿರ್ಬಂಧ ಹೇರಲಾಗಿದೆಯಂತೆ..!
ಅರೆ..! ಲೆದರ್ ಕೋಟ್ ಧರಿಸೋದಕ್ಕೆ ಏಕೆ ನಿರ್ಬಂಧ ಹೇರಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಕಿಮ್ ಜಾಂಗ್ ಉನ್ ಈ ರೀತಿಯ ವಿಚಿತ್ರ ಆದೇಶವನ್ನು ಹೊರಡಿಸುತ್ತಿರೋದು ಇದೇ ಮೊದಲೇನಲ್ಲ. ಸಾಕಷ್ಟು ಬಾರಿ ಈ ರೀತಿಯ ಅರ್ಥವೇ ಇಲ್ಲದ ಆದೇಶಗಳನ್ನು ಕಿಮ್ ಜಾಂಗ್ ಹೊರಡಿಸಿದ್ದಾರೆ. ಈ ಬಾರಿ ತನ್ನ ಸ್ಟೈಲ್ನ್ನು ಯಾರು ಕಾಪಿ ಮಾಡಬಾರದು ಎಂಬ ಕಾರಣಕ್ಕೆ ಈ ಆದೇಶವನ್ನು ಹೊರಡಿಸಿದ್ದಾರಂತೆ..!
2019ರಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೊದಲ ಬಾರಿಗೆ ಟ್ರೆಂಚ್ ಲೆದರ್ ಕೋಟ್ನ್ನು ಧರಿಸಿದ್ದರು. ಇದಾದ ಬಳಿಕ ಸಾರ್ವಜನಿಕ ವಲಯದಲ್ಲಿಯೂ ಈ ಕೋಟ್ ಭಾರೀ ಜನಪ್ರಿಯವಾಯ್ತು. ಚೀನಾದಿಂದ ಆರ್ಡರ್ ಮಾಡಿ ತರಿಸಿ ಈ ಕೋಟ್ಗಳನ್ನು ಜನರು ಧರಿಸುತ್ತಿದ್ದರು. ಆದರೆ ಕಿಮ್ಜಾಂಗ್ ಉನ್ ಧರಿಸಿದಂತೆ ಜಾಕೆಟ್ಗಳನ್ನೇ ಧರಿಸುವ ಮೂಲಕ ಜನರು ತನಗೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಮ್ಜಾಂಗ್ ಸಾರ್ವಜನಿಕರು ಈ ಕೋಟ್ ಧರಿಸದಂತೆ ನಿಷೇಧ ಹೇರಿದ್ದಾರೆ.
ಹಿಂದೊಮ್ಮೆ ಕಿಮ್ ಜಾಂಗ್ ಉನ್ರ ಸಹೋದರಿ ಕೂಡ ಈ ಟ್ರೆಂಚ್ ಕೋಟ್ ಧರಿಸಿದ್ದರು. ಇದಾದ ಬಳಿಕ ಮಹಿಳೆಯರೂ ಕೂಡ ಟ್ರೆಂಚ್ ಕೋಟ್ ಧರಿಸಲು ಆರಂಭಿಸಿದ್ದರು. ಇದು ಮಾತ್ರವಲ್ಲದೇ ಈ ವರ್ಷದ 8ನೇ ಪಕ್ಷದ ಕಾಂಗ್ರೆಸ್ ಮಿಲಿಟರಿ ಪರೇಡ್ನಲ್ಲೂ ಸಹ ಹಿರಿಯ ಅಧಿಕಾರಿಗಳು ಟ್ರೆಂಚ್ ಕೋಟ್ ಧರಿಸಿದ್ದರು. ಉತ್ತರ ಕೊರಿಯಾದಲ್ಲಿ ಟ್ರೆಂಚ್ಕೋಟ್ಗೆ ಬೆಲೆ ಎಷ್ಟಿದೆ ಅಂದರೆ ಇದನ್ನು ಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತೆ.
ಖಾಸಗಿ ಬಟ್ಟೆ ವ್ಯಾಪಾರಿಗಳು ಕೃತಕ ಚರ್ಮವನ್ನು ಆಮದು ಮಾಡಿಕೊಂಡು ಈ ರೀತಿಯ ಕೋಟ್ಗಳನ್ನು ತಯಾರಿಸಿ ಮಾರುತ್ತಿದ್ದರು. ಆದರೆ ಈಗ ಕಿಮ್ ಜಾಂಗ್ ಉನ್ ಆದೇಶದ ಬಳಿಕ ಅಂಗಡಿಗಳಿಗೆ ತೆರಳಿರುವ ಪೊಲೀಸರು ಇಂತಹ ಕೋಟ್ಗಳನ್ನು ಜಪ್ತಿ ಮಾಡುತ್ತಿದ್ದಾರೆ.