ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕ್ಷೇತ್ರದ ಚುನಾವಣೆ ಘೋಷಣೆಯ ನಂತರ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕದ ವರೆಗೆ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
ಅರ್ಹತಾ ದಿ.01.11.2023ಕ್ಕೆ ಅನ್ವಯಿಸುವಂತೆ ದಿ.01.11.2020 ಕ್ಕಿಂತ ಪೂರ್ವದಲ್ಲಿ ಪದವಿ ಪಡೆದಿರುವ ಅರ್ಹ ಮತದಾರರು ನಮೂನೆ-18 ರಲ್ಲಿ ಅರ್ಜಿ ಜೊತೆಗೆ ತಾವೂ ಸ್ಥಳೀಯ ನಿವಾಸಿಯಾಗಿರುವ ಯಾವದಾದರೊಂದು ದಾಖಲೆಯನ್ನು (ಆಧಾರ ಪ್ರತಿ/ ಚುನಾವಣಾ ಗುರುತಿನ ಚೀಟಿ/ ಪಡಿತರ ಚೀಟಿ/ ಇತರೆ) ದಾಖಲೆಗಳನ್ನು ಕ್ಷೇತ್ರದ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಾಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳ, ಸಹಾಯಕ ಆಯುಕ್ತರ, ತಹಶೀಲ್ದಾರರ ಹಾಗೂ ಕಲಬುರಗಿ, ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಸಲ್ಲಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.
ಆದರೆ ಕೆಲವು ಕಚೇರಿಗಳಲ್ಲಿ ನಮೂನೆ-18 ಅರ್ಜಿ ಸಲ್ಲಿಸಲು ಕೊನೆ ದಿ.06.11.2023 ಮುಕ್ತಾಯಗೊಂಡಿರುವುದರಿಂದ ಅರ್ಜಿ ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷಗಳಿಂದ ಬಂದಿರುವ ಹಿನ್ನೆಲೆಯಲ್ಲಿ ಜ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮತದಾರರ ನೋಂದಣಾಧಿಕಾರಿ ಕೃಷ್ಣ ಭಾಜಪೇಯಿ ಅವರು, ಪಟ್ಟಿಯಲ್ಲಿ ಹೆಸರು ಸೇರ್ಪಡೆ ಇದೊಂದು ನಿರಂತರ ನೋಂದಣಿ ಪ್ರಕ್ರಿಯೆಯಾಗಿದೆ. ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಕೊನೆ ದಿನಾಂಕದ ವರೆಗೂ ಅರ್ಹ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಪದವೀಧರರು ಮತದಾನದಿಂದ ವಂಚಿತರಾಗದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳುವಂತೆ ಅವರು ಕೋರಿದ್ದಾರೆ.