ಪಾಟ್ನಾ: ಬಿಹಾರದ ಬಕ್ಸರ್‌ನಲ್ಲಿ ದೊಡ್ಡ ರೈಲು ಅಪಘಾತ ಸಂಭವಿಸಿದೆ. ಈಶಾನ್ಯ ಎಕ್ಸ್ ಪ್ರೆಸ್‌ನ 21 ಬೋಗಿಗಳು(ರೈಲು ಸಂಖ್ಯೆ 12506) ಬಕ್ಸಾರ್‌ನ ರಘುನಾಥಪುರದಲ್ಲಿ ಹಳಿತಪ್ಪಿವೆ.. ಈ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ನೂರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ರೈಲ್ವೇ ತಿಳಿಸಿದೆ.
ಪೂರ್ವ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬೀರೇಂದ್ರ ಕುಮಾರ್ ಮಾತನಾಡಿ, ದೆಹಲಿಯ ಆನಂದ್ ವಿಹಾರ್ ನಿಲ್ದಾಣದಿಂದ ಅಸ್ಸಾಂನ ಕಾಮಾಖ್ಯಕ್ಕೆ ಹೋಗುತ್ತಿದ್ದ ಈಶಾನ್ಯ ಎಕ್ಸ್‌ಪ್ರೆಸ್‌ನ ಹಲವಾರು ಬೋಗಿಗಳು ರಾತ್ರಿ 9.35 ರ ಸುಮಾರಿಗೆ ಬಕ್ಸರ್ ಜಿಲ್ಲೆಯ ರಘುನಾಥಪುರ ನಿಲ್ದಾಣದ ಬಳಿ ಹಳಿತಪ್ಪಿವೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ತಂಡಗಳು ಸ್ಥಳದಲ್ಲಿವೆ. ಜಿಲ್ಲಾಡಳಿತವು ಬಕ್ಸರ್ ನಗರದ ಆಸ್ಪತ್ರೆಗಳಿಗೆ ತುರ್ತು ಕ್ರಮಕ್ಕೆ ಸೂಚನೆ ನೀಡಿದೆ ಎಂದು ರೈಲ್ವೆ ಪೊಲೀಸ್ ಪಡೆ ಇನ್ಸ್‌ಪೆಕ್ಟರ್ ದೀಪಕ್ ಕುಮಾರ್ ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ರೈಲು ಹಳಿತಪ್ಪಿದ ಬಗ್ಗೆ ಮಾಹಿತಿ ಬಂದ ತಕ್ಷಣ ಅವರು ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಬಿಹಾರ ಸರ್ಕಾರವು ಸಂತ್ರಸ್ತರ ಮತ್ತು ಗಾಯಾಳುಗಳ ರಕ್ಷಣೆ, ಪರಿಹಾರ ಮತ್ತು ಚಿಕಿತ್ಸೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು.
ರೈಲ್ವೇ ಸಾಮಾಜಿಕ ಜಾಲತಾಣದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಪಾಟ್ನಾಗೆ 9771449971, ಡಣಾಪುರಕ್ಕೆ 8905697493, ಅರ್ರಾಗೆ 8306182542 ಮತ್ತು ನಿಯಂತ್ರಣ ಕೊಠಡಿಗೆ 7759070004 ಸಂಖ್ಯೆ ನೀಡಲಾಗಿದೆ.