ವಿಯೆಟ್ನಾಂನ ಅಧಿಕಾರಿಯೊಬ್ಬ ಖ್ಯಾತ ಶೆಫ್ ನುಸ್ರೆತ್ ಗಾಕೇ ಅಲಿಯಾಸ್ ಸಾಲ್ಟ್ ಬೇ ಲಂಡನ್ನಲ್ಲಿ ನಡೆಸುವ ರೆಸ್ಟೋರೆಂಟ್ ಒಂದರಲ್ಲಿ ಚಿನ್ನ ಲೇಪಿತ ಸ್ಟೀಕ್ ತಿನ್ನುತ್ತಿರುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ ಟರ್ಕಿಯ ಸೆಲೆಬ್ರಿಟಿ ಶೆಫ್ನ ಅನುಕರಣೆ ಮಾಡಿಕೊಂಡು ಬೀಫ್ ನೂಡಲ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಯೆಟ್ನಾಂ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.
ಬುಯಿ ಟುವಾನ್ ಲಾಮ್, 38, ಎಂಬ ಈ ಶೆಫ್ ವಿಯೆಟ್ನಾಂ ಕೇಂದ್ರ ಪ್ರದೇಶದ ಡನಾಂಗ್ ನಗರದವನಾಗಿದ್ದು, ತಾನು ಮಾಡಿದ ವಿಡಿಯೋ ಯಾರನ್ನೂ ಅಣಕ ಮಾಡುವ ಉದ್ದೇಶದ್ದಲ್ಲ ಎಂದಿದ್ದಾನೆ. ಬೆಂದ ದನದ ಮಾಂಸವನ್ನು ಸ್ಟೈಲಿಶ್ ಆಗಿ ಸ್ಲೈಸ್ ಮಾಡುತ್ತಾ ಉಪ್ಪು ಉದುರಿಸುತ್ತಿರುವ ಬುಯಿಯನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
“ಈ ವಿಡಿಯೋವನ್ನು ನನ್ನ ಬೀಫ್ ನೂಡಲ್ ಶಾಪ್ಗೆ ಜಾಹೀರಾತು ಮಾಡಿಕೊಳ್ಳಲೆಂದು ಖುಷಿಗಾಗಿ ಮಾಡಿದೆ. ನಾನು ಈ ವಿಡಿಯೋ ಪೋಸ್ಟ್ ಮಾಡುತ್ತಲೇ ಹೆಚ್ಚಿನ ಸಂಖ್ಯೆಯಲ್ಲಿ ಗಿರಾಕಿಗಳು ಬರುತ್ತಿದ್ದಾರೆ,” ಎಂದು ಲಿಯಾಮ್ ಹೇಳಿಕೊಂಡಿದ್ದಾನೆ.
ಸೂಪರ್ ಕ್ಯೂಟ್ ಫೋಟೋ: ಹುಟ್ಟಿದ ಕೆಲವೇ ಗಂಟೆಯಲ್ಲಿ ಅಮ್ಮನಿಗೇ ದಾರಿ ತೋರಿದ ಮರಿ ಆನೆ
ವಿಯೆಟ್ನಾಂನ ಸಾರ್ವಜನಿಕ ಭದ್ರತಾ ಸಚಿವರಿಗೆ ಉಣಬಡಿಸುತ್ತಿರುವ ತನ್ನ ವಿಡಿಯೋವನ್ನು ಗೋಕೆ ಕಳೆದ ವಾರ ಅಪ್ಲೊಡ್ ಮಾಡಿದ್ದ. ಲಂಡನ್ನಲ್ಲಿರುವ ಗೋಕೆನ ರೆಸ್ಟೋರೆಂಟ್ನಲ್ಲಿ ಸಿಗುವ ಚಿನ್ನ ಲೇಪಿತ ಈ ಸ್ಟೀಕ್ ಒಂದರ ಬೆಲೆ 1450 ಪೌಂಡ್ನಷ್ಟಿದೆ.
ಇದರ ಬೆನ್ನಿಗೇ ಮಾಡಲಾದ ಈ ಪರೋಡಿ ವಿಡಿಯೋ ಸಹ ವೈರಲ್ ಆಗಿತ್ತು. ವಿಯೆಟ್ನಾಂನಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ವಿರುದ್ಧ ದನಿ ಏರಿಸುವ ಮಂದಿಯನ್ನು ಪೊಲೀಸರು ಆಗಾಗ ವಿಚಾರಣೆಗೆ ಕರೆಯುತ್ತಲೇ ಇರುತ್ತಾರೆ.
ಇದೇ ವೇಳೆ, ವಿಯೆಟ್ನಾಂನಲ್ಲಿ ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಸಮರ ನಡೆಯುತ್ತಿರುವ ನಡುವೆ ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಅಷ್ಟು ಬೆಲೆ ಬಾಳುವ ಸ್ಟೀಕ್ ಅನ್ನು ತಿನ್ನುತ್ತಾ ವಿಡಿಯೋ ಮಾಡಿಕೊಂಡಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಸಹ ಎದ್ದಿವೆ.