ಶ್ರೀನಗರ: ಭಯೋತ್ಪಾದಕರು ಶ್ರೀನಗರದಲ್ಲಿ ವ್ಯಾಪಾರಿಯನ್ನು ಹತ್ಯೆ ಮಾಡಿದ್ದಾರೆ. ಕಳೆದ 2 ವಾರಗಳಲ್ಲಿ ನಡೆದ 8 ನೇ ಹತ್ಯೆ ಇದಾಗಿದೆ.
ಕಾಶ್ಮೀರದಲ್ಲಿ ನಡೆದ ಸರಣಿ ನಾಗರಿಕ ಹತ್ಯೆಗಳು ಶಿಬಿರಗಳಲ್ಲಿ ವಾಸಿಸುತ್ತಿರುವ ಹಲವಾರು ಕಾಶ್ಮೀರಿ ಪಂಡಿತರ ನಿರ್ಗಮನಕ್ಕೆ ಕಾರಣವಾಗಿದೆ. ಶ್ರೀನಗರದಲ್ಲಿ ಸ್ಥಳೀಯನಲ್ಲದ ಬೀದಿ ಬದಿ ವ್ಯಾಪಾರಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ, ಭಯೋತ್ಪಾದಕರು ವ್ಯಾಪಾರಿಗಳನ್ನು ಪಾಯಿಂಟ್-ಬ್ಲಾಂಕ್ ನಲ್ಲಿ ಹೊಡೆದುರುಳಿಸಿದ್ದಾರೆ.
ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಸ್ಥಳೀಯರಲ್ಲದ ಮಾರಾಟಗಾರ ಅರಬಿಂದ್ ಕುಮಾರ್ ಸಾಹ್ ಅನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ ಎಂದು ಕಾಶ್ಮೀರ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದರು.
ಮೃತರು ಗೋಲ್ ಗಪ್ಪಾ ಮಾರಾಟಗಾರರಾಗಿದ್ದು, ಅವರನ್ನು ಬಿಹಾರದ ಬಂಕಾದಿಂದ ಬಂದಿದ್ದ ಅರಬಿಂದ್ ಕುಮಾರ್ ಸಾಹ್ ಎಂದು ಗುರುತಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಆತನನ್ನು ಭಯೋತ್ಪಾದಕರು ಕೊಂದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ಇಂದು ಶ್ರೀನಗರದಲ್ಲಿ ನಡೆದ ಭೀಕರ ದಾಳಿಯಲ್ಲಿ ಬೀದಿ ಬದಿ ವ್ಯಾಪಾರಿ ಅರಬಿಂದ್ ಕುಮಾರ್ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ನಾಗರಿಕರನ್ನು ಈ ರೀತಿ ಗುರಿಯಾಗಿಸಿಕೊಂಡ ಇನ್ನೊಂದು ಪ್ರಕರಣವಾಗಿದೆ. ದುಡಿಮೆಗಾಗಿ ಶ್ರೀನಗರಕ್ಕೆ ಬಂದಿದ್ದ ಅವರನ್ನು ಹತ್ಯೆ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.