ಕಾರ್ಲ್ಲಿ ಚಾಲನೆ ಮಾಡ್ತಿದ್ದ ಮಹಿಳೆ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ಆಕೆಗೆ ದಂಡ ಹಾಕಿದ್ದಾರೆ. ಅರೆ ! ಇದೆಂಥಾ ವಿಚಿತ್ರ ಎಂದು ನಿಮಗೆ ಅನಿಸಬಹುದು. ಖುದ್ದು ಆ ಮಹಿಳೆಗೂ ಇದೇ ರೀತಿ ಅನಿಸಿದೆ.
ಜೂನ್ 27 ರಂದು ಉತ್ತರಪ್ರದೇಶದ ನೋಯ್ಡಾದ ಹೋಶಿಯಾರ್‌ಪುರ ಪ್ರದೇಶದಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಗೌತಮ್ ಬುದ್ದ ನಗರ ಸಂಚಾರ ಪೊಲೀಸರು 1,000 ರೂ. ಚಲನ್ ನೀಡಿದ್ದಾರೆ. ಆದರೆ ಮಹಿಳೆ ತನ್ನ ಹೆಸರಿನಲ್ಲಿ ಯಾವುದೇ ಬೈಕ್ ಹೊಂದಿಲ್ಲ ಎಂದು ಹೇಳಿದ್ದಾರೆ. ಗ್ರೇಟರ್ ನೋಯ್ಡಾದ ಝೀಟಾ-1 ರ ನಿವಾಸಿ-ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಶೈಲಜಾ ಚೌಧರಿ ದಂಡದ ಇ-ಚಲನ್ ಸ್ವೀಕರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
”ಜುಲೈ 7ರ ಸಂಜೆ ನಾನು ಮನೆಕೆಲಸದಲ್ಲಿ ತೊಡಗಿದ್ದಾಗ ನನ್ನ ಮೊಬೈಲ್‌ಗೆ ಸಂಚಾರ ಪೊಲೀಸರಿಂದ ಸಂದೇಶ ಬಂದಿತ್ತು. ಆರಂಭದಲ್ಲಿ ನನ್ನ ಮನೆಗೆ ಭೇಟಿ ನೀಡಿದ ಸಂಬಂಧಿಕರು ನನ್ನ ಕಾರನ್ನು ಚಾಲನೆ ಮಾಡುವಾಗ ಸಂಚಾರ ನಿಯಮಗಳನ್ನು ಉಲ್ಲಂಘಿಸಿರಬಹುದು ಎಂದು ನಾನು ಭಾವಿಸಿದೆ. ಆದರೆ ನಾನು ಸಂದೇಶವನ್ನು ತೆರೆದಾಗ ಜೂನ್ 27 ರಂದು ಬೆಳಿಗ್ಗೆ 8.29 ಕ್ಕೆ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿದ್ದಕ್ಕಾಗಿ ಚಲನ್ ಬಂದಿತ್ತು. ಅದರಲ್ಲಿ ಬೈಕಿನ ಫೋಟೋ ಮತ್ತು ನನ್ನ ಕಾರಿನ ನೋಂದಣಿ ಸಂಖ್ಯೆಯನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ, ”ಎಂದು ಶೈಲಜಾ ಚೌಧರಿ ಹೇಳಿದರು.
ಇದಲ್ಲದೆ ಚಲನ್‌ನಲ್ಲಿ ನಮೂದಿಸಲಾದ ದಿನಾಂಕದಂದು ಹೋಶಿಯಾರ್‌ಪುರದಲ್ಲಿ ನಾನು ವಾಹನ ಚಾಲನೆ ಮಾಡಿಲ್ಲ ಎಂದು ಅವರು ಹೇಳಿದರು. ಇದು ಸಂಚಾರ ಪೊಲೀಸರ ಪ್ರಮಾದವಾಗಿದೆ. ಅವರು ಹೊರಡಿಸಿದ ಚಲನ್ ಅನ್ನು ರದ್ದುಗೊಳಿಸಬೇಕು ಎಂದು ಹೇಳಿದರು.
ಏತನ್ಮಧ್ಯೆ, ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಸ್ವಯಂಚಾಲಿತವಾಗಿ ವಾಹನದ ನೋಂದಣಿ ಸಂಖ್ಯೆಯನ್ನು ಓದುತ್ತದೆ, ಆದರೆ ಕೆಲವೊಮ್ಮೆ ಸಿಸ್ಟಮ್ ನೋಂದಣಿ ಸಂಖ್ಯೆಯನ್ನು ತಪ್ಪಾಗಿ ಓದಬಹುದು ಎಂದು ಸಂಚಾರ ಉಪ ಪೊಲೀಸ್ ಆಯುಕ್ತ ಪ್ರೀತಿ ಯಾದವ್ ಹೇಳಿದ್ದಾರೆ.
ವಾಹನ ಮಾಲೀಕರು ಟ್ರಾಫಿಕ್ ಪೊಲೀಸರನ್ನು ಸಂಪರ್ಕಿಸಿದರೆ, ಚಲನ್ ತಪ್ಪಾಗಿದೆ ಎಂದು ತಿಳಿದುಬಂದರೆ ಅದನ್ನು ರದ್ದುಗೊಳಿಸುತ್ತಾರೆ. ದೂರುದಾರರು ನೇರವಾಗಿ ನಮ್ಮ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಇಮೇಲ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು ಎಂದು ಡಿಸಿಪಿ ಪ್ರೀತಿ ಯಾದವ್ ಹೇಳಿದರು.