ಆಟೋದಲ್ಲಿ ತೆರಳುತ್ತಿದ್ದ ವೇಳೆ ಟೆಕ್ಕಿಯನ್ನು ಎಳೆದ ಬೈಕ್ ಸವಾರರು ಮೊಬೈಲ್ ಫೋನ್ ಕಸಿದು ಪರಾರಿಯಾದ ಘಟನೆಯು ಉತ್ತರ ಪ್ರದೇಶದ ನೋಯ್ಡಾದಲ್ಲಿ ಸಂಭವಿಸಿದೆ. ಬೈಕ್ನಲ್ಲಿದ್ದ ಇಬ್ಬರು ಸವಾರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಬಿಹಾರದ ಸಹರ್ಸಾ ಜಿಲ್ಲೆಯ ನಿವಾಸಿಯಾದ ಆಕಾಶ್ ಕುಮಾರ್(28), ಕಸ್ನಾದಲ್ಲಿ ಒಪ್ಪೊ ಯುನಿಟ್ ಪ್ರಾಸೆಸ್ ಇಂಜಿನಿಯರ್ ಆಗಿದ್ದಾರೆ. ರಾತ್ರಿ 8:30ರ ಸುಮಾರಿಗೆ ತನ್ನ ಬಾಡಿಗೆ ಮನೆಯಿಂದ ಕಚೇರಿಯ ಕಡೆಗೆ ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು.
ಆಟೋ ರಿಕ್ಷಾ ಸುರ್ಜಾಪುರ – ಕಸ್ನಾ ರಸ್ತೆಯನ್ನು ತಲುಪಿದ್ದಂತೆ ಬೈಕ್ನಲ್ಲಿ ಆಟೋದ ಎಡಗಡೆಗೆ ಬಂದ ಇಬ್ಬರು ಆಕಾಶ್ ಬಳಿಯಿದ್ದ ಒಪ್ಪೊ ಮೊಬೈಲ್ನ್ನು ಕಸಿಯಲು ಯತ್ನಿಸಿದ್ದಾರೆ. ಆದರೆ ಆಕಾಶ್ ಮೊಬೈಲ್ ಕೈಯಲ್ಲೇ ಗಟ್ಟಿಯಾಗಿ ಹಿಡಿದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಕಳ್ಳರು ಆಟೋ ರಿಕ್ಷಾದಿಂದ ಆಕಾಶ್ನನ್ನು ಎಳೆದು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಆಕಾಶ್, ತಮಗೆ ಪೊಲೀಸರು ಯಾವುದೇ ರೀತಿಯ ಸಹಾಯ ಮಾಡಿಲ್ಲ. ಹೀಗಾಗಿ ನಾನು ಆಸ್ಪತ್ರೆಗೂ ಒಬ್ಬನೇ ಹೋದೆ ಎಂದು ಹೇಳಿದ್ದಾರೆ. ಕೈಯಲ್ಲಿ ಆದ ಗಾಯಕ್ಕೆ 20 ಹೊಲಿಗೆಗಳನ್ನು ಹಾಕಲಾಗಿದೆ. ನಾನಿದ್ದ ಆಟೋ ರಿಕ್ಷಾದ ಚಾಲಕ ಪರಾರಿಯಾದನು ಹೀಗಾಗಿ ನಾನು ಇನ್ನೊಂದು ಆಟೋವನ್ನು ಹುಡುಕಬೇಕಾಯ್ತು. ನಾನು ಪೊಲೀಸರ ಬಳಿ ಸಹಾಯ ಕೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ.
ಆಕಾಶ್ ಗೆಳೆಯ ಚಂದನ್ ಸಿಸಿ ಟಿವಿ ದೃಶ್ಯ ಆಧರಿಸಿ ಅಪರಾಧ ನಡೆದಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.