ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಶಾಲೆಯೊಂದರ ನಿರ್ದೇಶಕನನ್ನು ಶಿಕ್ಷಕರ ಶೌಚಾಲಯದ ಬಲ್ಬ್ ಸಾಕೆಟ್ನಲ್ಲಿ ಗೂಢಚಾರ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಕ್ಯಾಮೆರಾ, ಶಾಲಾ ನಿರ್ದೇಶಕನಿಗೆ ತನ್ನ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಮೂಲಕ ಶೌಚಾಲಯಕ್ಕೆ ಪ್ರವೇಶಿಸುವ ವ್ಯಕ್ತಿಗಳ ಲೈವ್ ದೃಶ್ಯಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿತ್ತು. ಈ ಕ್ಯಾಮೆರಾವನ್ನು ಒಬ್ಬ ಶಿಕ್ಷಕಿ ಪತ್ತೆ ಹಚ್ಚಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಘಟನೆ ನೋಯ್ಡಾದ ಸೆಕ್ಟರ್ 70 ರಲ್ಲಿರುವ “ಲರ್ನ್ ವಿಥ್ ಫನ್” ಎಂಬ ಪ್ಲೇ ಶಾಲೆಯಲ್ಲಿ ನಡೆದಿದೆ. ಡಿಸೆಂಬರ್ 10 ರಂದು, ಒಬ್ಬ ಶಿಕ್ಷಕಿ ಶೌಚಾಲಯದ ಬಲ್ಬ್ ಹೋಲ್ಡರ್ನಲ್ಲಿ ಅಸಹಜವಾದದ್ದನ್ನು ಗಮನಿಸಿದ್ದರು. ಅವರು ಹೋಲ್ಡರ್ನಲ್ಲಿ ಚಿಕ್ಕ ಬೆಳಕನ್ನು ಗಮನಿಸಿದ್ದು, ಇದು ಅವರ ಅನುಮಾನವನ್ನು ಹೆಚ್ಚಿಸಿತ್ತು. ಹತ್ತಿರದಿಂದ ಪರೀಕ್ಷಿಸಿದಾಗ, ಸ್ಪೈ ಕ್ಯಾಮೆರಾ ಕಂಡುಬಂದಿದೆ. ಅವರು ತಕ್ಷಣವೇ ಶಾಲೆಯ ಭದ್ರತಾ ಉಸ್ತುವಾರಿಗೆ ಈ ವಿಷಯವನ್ನು ತಿಳಿಸಿದ್ದು, ಅವರು ಸಾಧನ ಇರುವುದನ್ನು ದೃಢಪಡಿಸಿದ್ದಾರೆ.
ನಂತರ ಶಿಕ್ಷಕಿ ಈ ವಿಷಯವನ್ನು ಶಾಲಾ ನಿರ್ದೇಶಕ ನವನೀಶ್ ಸಹಾಯ್ ಮತ್ತು ಶಾಲೆಯ ಸಂಯೋಜಕಿ ಪಾರುಲ್ ಅವರಿಗೆ ತಿಳಿಸಿದ್ದು. ಆದಾಗ್ಯೂ, ಅವರು ಆರೋಪಗಳನ್ನು ತಳ್ಳಿಹಾಕಿದ್ದರು.
ಶಿಕ್ಷಕಿಯ ಆರೋಪದ ಪ್ರಕಾರ, ಸಹಾಯ್ ಅಥವಾ ಪಾರುಲ್ ಈ ಸಮಸ್ಯೆಯನ್ನು ನಿಭಾಯಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಶಿಕ್ಷಕಿಯ ದೂರಿನ ಹಿನ್ನೆಲೆಯಲ್ಲಿ, ನೋಯ್ಡಾ ಕೇಂದ್ರ ಉಪ ಪೊಲೀಸ್ ಆಯುಕ್ತ (ಡಿ.ಸಿ.ಪಿ) ಶಕ್ತಿ ಮೋಹನ್ ಅವಾಸ್ತಿ ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿದ್ದು, ತನಿಖೆಯು ಗೂಢಚಾರ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿತ್ತು ಮತ್ತು ಅದನ್ನು ರೆಕಾರ್ಡ್ ಮಾಡದೆಯೇ ಲೈವ್ ಸ್ಟ್ರೀಮ್ ಮಾಡುವ ಸಾಮರ್ಥ್ಯ ಹೊಂದಿತ್ತು ಎಂದು ದೃಢಪಡಿಸಿದ್ದಾರೆ. ನಂತರ ನಿರ್ದೇಶಕ ನವನೀಶ್ ಸಹಾಯ್ ನನ್ನು ಬಂಧಿಸಲಾಗಿದೆ.
ಪೊಲೀಸ್ ಹೇಳಿಕೆಗಳ ಪ್ರಕಾರ, ವಿಚಾರಣೆಯಲ್ಲಿ ಸಹಾಯ್, ಆನ್ಲೈನ್ನಲ್ಲಿ 22,000 ರೂಪಾಯಿಗೆ ಗೂಢಚಾರ ಕ್ಯಾಮೆರಾವನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದು. ಈ ಸಾಧನವನ್ನು ನಿರ್ದಿಷ್ಟವಾಗಿ ಬಲ್ಬ್ ಹೋಲ್ಡರ್ನಲ್ಲಿ ಮರೆಮಾಚಲು ವಿನ್ಯಾಸಗೊಳಿಸಲಾಗಿದೆ, ಇದು ಹತ್ತಿರದಿಂದ ಪರೀಕ್ಷಿಸದಿದ್ದರೆ ಅದನ್ನು ಪತ್ತೆಹಚ್ಚುವುದು ಅಸಾಧ್ಯವಾಗಿತ್ತು. ಸಹಾಯ್, ಕ್ಯಾಮೆರಾ ಬಳಸಿಕೊಂಡು ಶಿಕ್ಷಕಿಯರ ಶೌಚಾಲಯದಿಂದ ಲೈವ್ ದೃಶ್ಯಗಳನ್ನು ನೇರವಾಗಿ ತನ್ನ ವೈಯಕ್ತಿಕ ಸಾಧನಗಳಿಗೆ ಸ್ಟ್ರೀಮ್ ಮಾಡುತ್ತಿದ್ದ ಎನ್ನಲಾಗಿದೆ.