ನವದೆಹಲಿ: ನೋಯ್ಡಾದ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದವರೂ ರೋಗಿಗಳ ಹೆಸರಲ್ಲಿ ಆಸ್ಪತ್ರೆಯ ಬೆಡ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿರುವ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದ ಅನೇಕ ಜನ ಹಾಸಿಗೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಗೌತಮಬುದ್ಧ ನಗರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನೋಯ್ಡಾ ಜಿಲ್ಲೆಯ ಅನೇಕ ಆಸ್ಪತ್ರೆಗಳಲ್ಲಿ 200 ಕ್ಕೂ ಹೆಚ್ಚು ಮಂದಿಯನ್ನು ಜಾಗ ಖಾಲಿ ಮಾಡಿಸಲಾಗಿದೆ. ಕೊರೋನಾ ಸೋಂಕಿತರಿಗೆ ಅಗತ್ಯವಾದ ಬೆಡ್ ಗಳನ್ನು ಬಿಟ್ಟುಕೊಡುವಂತೆ ಸೂಚಿಸಿದ್ದರೂ, ಕೆಲವು ಆಸ್ಪತ್ರೆಗಳು ಬಿಟ್ಟುಕೊಟ್ಟಿರಲಿಲ್ಲ. ಬೆಡ್ ಭರ್ತಿಯಾಗಿವೆ ಎಂದು ಹೇಳಿವೆ.
ಮುಖ್ಯ ವೈದ್ಯಕೀಯ ಅಧಿಕಾರಿ ದೀಪಕ್ ಬಹಿರಿ ಸೇರಿದಂತೆ ಗೌತಮಬುದ್ಧ ನಗರದ ಹಿರಿಯ ಆಡಳಿತ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಸುಹಾಸ್ ಎಲ್.ವೈ. ವಾಸ್ತವ್, ಮಾಹಿತಿ ಅಧಿಕಾರಿ ರಾಕೇಶ್ ಚೌಹಾಣ್ ನೇತೃತ್ವದಲ್ಲಿ ಸಭೆ ನಡೆಸಿ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿದಾಗ ಅಗತ್ಯವಿಲ್ಲದವರು ಹಾಸಿಗೆಗಳನ್ನು ಆಕ್ರಮಿಸಿಕೊಂಡಿರುವುದು ಕಂಡುಬಂದಿದೆ. ಅನೇಕ ಆಸ್ಪತ್ರೆಗಳಲ್ಲಿದ್ದ ಇಂತಹ 200 ಮಂದಿಯನ್ನು ಜಾಗ ಖಾಲಿ ಮಾಡಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.