ನವದೆಹಲಿ: ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶಸ್ತ್ರಚಿಕಿತ್ಸೆ ಮಾಡಲು ಆಯುರ್ವೇದ ವೈದ್ಯರಿಗೆ ಅನುಮತಿ ನೀಡಲಾಗಿದೆ.
ಸರಿಯಾದ ತರಬೇತಿಯೊಂದಿಗೆ ಕೆಲವು ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ಸ್ನಾತಕೋತ್ತರ ಪದವಿ ಪಡೆದ ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲು ತೀರ್ಮಾನಿಸಿದೆ. ಈ ಕುರಿತಾಗಿ ಅಧಿಸೂಚನೆಯನ್ನು ಹೊರತಂದಿದೆ.
ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯಾ ಮೆಡಿಸನ್ ಅಧ್ಯಕ್ಷ ಡಾ. ಜಯಂತ್ ದಿಯೋಪೂಜಾರಿ ನೀಡಿರುವ ಮಾಹಿತಿಯಂತೆ, ಆಯುರ್ವೇದ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ 25 ವರ್ಷಗಳಿಂದ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ಕಾನೂನುಬದ್ಧವಾಗಿ ಸ್ಪಷ್ಟಪಡಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.
ಸಾಮಾನ್ಯ ಶಸ್ತ್ರಚಿಕಿತ್ಸೆ, ಇ.ಎನ್.ಟಿ., ನೇತ್ರವಿಜ್ಞಾನ ಆರ್ಥೋ ಮತ್ತು ದಂತ ವಿಧಾನಗಳ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಲಾಗಿದೆ. ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು, ಗ್ಯಾಂಗ್ರಿನ್, ರೂಟ್ ಕೆನಾಲ್ ಮೊದಲಾದ ಸಾಮಾನ್ಯ ಶಸ್ತ್ರಚಿಕಿತ್ಸೆಗಳ ತರಬೇತಿ ಪಡೆದ ಬಳಿಕ ಆಯುರ್ವೇದ ವೈದ್ಯರು ಕೂಡ ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದಾಗಿದೆ ಎಂದು ಹೇಳಲಾಗಿದೆ.
ಇಂಡಿಯನ್ ಮೆಡಿಕಲ್ ಸೆಂಟ್ರಲ್ ಕೌನ್ಸಿಲ್(ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಯಮ 2016 ಕ್ಕೆ ತಿದ್ದುಪಡಿ ಮಾಡುವ ಮೂಲಕ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘ ಖಂಡಿಸಿದ್ದು, ಇದು ಭಾರತದ ವೈದ್ಯಕೀಯ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸುವ ಕ್ರಮವಾಗುತ್ತದೆ ಎಂದು ಹೇಳಲಾಗಿದೆ.
ಸಾಮಾನ್ಯ ಶಸ್ತ್ರಚಿಕಿತ್ಸೆ ಆಧುನಿಕ ವೈದ್ಯಕೀಯ ವಿಜ್ಞಾನದ ಒಂದು ಭಾಗವಾಗಿದೆ, ಇದನ್ನು ಆಯುರ್ವೇದದೊಂದಿಗೆ ಮುಖ್ಯವಾಹಿನಿಗೆ ತರಲು ಸಾಧ್ಯವಿಲ್ಲ. ಆರೈಕೆ ಮತ್ತು ಸುರಕ್ಷತೆಯ ಮೂಲ ಮಾನದಂಡಗಳಿಗೆ ಅಡ್ಡಿಯಾಗುತ್ತದೆ. ರೋಗಿಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಭಾರತದ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷ ಡಾ. ಪಿ. ರಘು ರಾಮ್ ಹೇಳಿದ್ದಾರೆ.