ಢಾಕಾ: ಅಶಾಂತಿ, ಅರಾಜಕತೆ, ಹಿಂಸಾಚಾರ ಮುಂದುವರೆದಿರುವ ಬಾಂಗ್ಲಾದೇಶದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಇಂದು ಅಧಿಕಾರಕ್ಕೇರಲಿದೆ.
ಯೂನಸ್ ಸೇರಿ ನೂತನ ಹಂಗಾಮಿ ಸರ್ಕಾರದ ಪ್ರಮುಖರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವೈದ್ಯಕೀಯ ಪ್ರಕ್ರಿಯೆಗಾಗಿ ಪ್ಯಾರಿಸ್ ನಲ್ಲಿರುವ 84 ವರ್ಷದ ಯೂನಸ್ ಅವರು ಢಾಕಾಗೆ ತೆರಳಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಹಂಗಾಮಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ದೇಶದ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ಹೌದು, ನಾನು ಮನೆಗೆ ಹಿಂತಿರುಗಲು ಎದುರು ನೋಡುತ್ತಿದ್ದೇನೆ. ಅಲ್ಲಿ ಏನಾಗುತ್ತಿದೆ ಮತ್ತು ನಾವು ಎದುರಿಸುತ್ತಿರುವ ತೊಂದರೆಯಿಂದ ಹೊರಬರಲು ನಮ್ಮನ್ನು ನಾವು ಹೇಗೆ ಸಂಘಟಿಸಬಹುದು ಎಂಬುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ಯಾರಿಸ್‌ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ ಯೂನಸ್ ತಿಳಿಸಿದ್ದಾರೆ.
ಏತನ್ಮಧ್ಯೆ, ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನ್ನ ಸಹೋದರಿಯೊಂದಿಗೆ ಭಾರತಕ್ಕೆ ಪರಾರಿಯಾಗಿದ್ದ ಶೇಖ್ ಹಸೀನಾ ಅನಿರ್ದಿಷ್ಟ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ. ಅವಾಮಿ ಲೀಗ್ ಪಕ್ಷದ ಮುಖ್ಯಸ್ಥರಿಗೆ ಯುರೋಪಿಯನ್ ರಾಷ್ಟ್ರದಲ್ಲಿ ಆಶ್ರಯ ನೀಡುವಲ್ಲಿ ಭಾರತ ಸರ್ಕಾರ ಸಹಕರಿಸುತ್ತಿದೆ ಎಂದು ಹೇಳಲಾಗಿದೆ.