ಬೆಂಗಳೂರು : ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಮೀಸಲಾತಿ ಪಡೆಯದೇ ಸಾಮಾನ್ಯ ವರ್ಗದ ಹುದ್ದೆಗಳಿಗೆ ಆಯ್ಕೆಯಾದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಂಧುತ್ವ ಪ್ರಮಾಣ ಕಡ್ಡಾಯಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಕಾರ್ಯದರ್ಶಿ ವಂದಿತಾ ಶರ್ಮಾಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿಗಳು ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ನಿಯಮಗಳು, 1992 ರನ್ವಯ ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಗೊಳ್ಳುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿಯಲ್ಲಿ ವಿವಿಧ ಮೀಸಲಾತಿಯಡಿ ಆಯ್ಕೆ ಹೊಂದುವ ಹಾಗೂ ಸದರಿ ಮೀಸಲಾತಿಯಿಂದ ರಿಯಾಯತಿ ಪಡೆಯುವ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣ ಪತ್ರಗಳು ಸಿಂಧುವೆ ಎಂಬ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಸಿಂಧುತ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ.
ಅದರ, ಮೀಸಲಾತಿ ಕೋರಿ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಗೊಂಡಾಗಲೂ ಸಿಂಧು ವುಮಾಣ ಪತ್ರ ಸಲ್ಲಿಸುವಂತೆ ಕೆಲವು ನೇಮಕಾತಿ ಪ್ರಾಧಿಕಾರಿಗಳು ಅಭ್ಯರ್ಥಿಗಳಿಗೆ ಸೂಚಿಸುತ್ತಿವೆ, ಇದರಿಂದ ಅಂತಿಮ ಆಯ್ಕೆಪಟ್ಟಿಯಲ್ಲಿ ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಯಾದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನಾವಶ್ಯಕ ತೊಂದರೆಯಾಗುತ್ತಿದೆ.
ಆದ್ದರಿಂದ, ಮೀಸಲಾತಿ ಕೋರಿ ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಮೀಸಲಾತಿಯಿಂದ ಯಾವುದೇ ರಿಯಾಯತಿ ಪಡೆಯದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಗೊಂಡ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಮರಿಗೆ ಸೂಕ್ತ ನಿರ್ದೇಶನ ನೀಡಲು ಸೂಚಿಸಿದೆ.