ಫಿರೋಜಾಬಾದ್: ಉತ್ತರ ಪ್ರದೇಶ ರಾಜ್ಯದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಉತ್ತೇಜಿಸುವ ಪ್ರಯತ್ನದಲ್ಲಿ ಫಿರೋಜಾಬಾದ್ ಜಿಲ್ಲೆಯ ಸರ್ಕಾರಿ ನೌಕರರಿಗೆ ಲಸಿಕೆ ಪಡೆಯದಿದ್ದರೆ ಸಂಬಳ ನೀಡುವುದಿಲ್ಲ ಎಂಬ ತಿಳಿವಳಿಕೆ ನೀಡಲಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯಸಿಂಗ್ ಅವರು ಲಸಿಕೆ ಪಡೆಯದವರಿಗೆ ವೇತನ ಕೊಡುವುದಿಲ್ಲ ಎಂದು ಮೌಖಿಕ ಆದೇಶ ಹೊರಡಿಸಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿ ಚಾರ್ಚಿತ್ ಗೌರ್ ತಿಳಿಸಿದ್ದಾರೆ. ವ್ಯಾಕ್ಸಿನೇಷನ್ ಗೆ ವೇಗ ನೀಡಲು ಮತ್ತು ಸಾಂಕ್ರಾಮಿಕ ರೋಗ ಕೊನೆಗೊಳಿಸಲು ಉತ್ತರಪ್ರದೇಶ ಸರ್ಕಾರ ವಿವಿಧ ಕ್ರಮ ತೆಗೆದುಕೊಳ್ಳುತ್ತಿದೆ. ಈಗಿನ ಆದೇಶದ ಪ್ರಕಾರ, ಯಾವುದೇ ಉದ್ಯೋಗಿ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಮೇ ತಿಂಗಳ ವೇತನ ತಡೆಹಿಡಿಯಲಾಗುವುದು ಎಂದು ಹೇಳಲಾಗಿದೆ.
ಜಿಲ್ಲಾಧಿಕಾರಿಗಳು ಮತ್ತು ಇಲಾಖೆಗಳ ಮುಖ್ಯಸ್ಥರಿಗೆ ಈ ಕುರಿತಾಗಿ ನಿರ್ದೇಶನ ನೀಡಲಾಗಿದೆ. ಲಸಿಕೆ ಪಡೆಯದವರ ಪಟ್ಟಿ ಸಿದ್ದಪಡಿಸುವಂತೆ ತಿಳಿಸಲಾಗಿದೆ, ಲಸಿಕೆ ಹಾಕಿಸಿಕೊಳ್ಳದವರ ವೇತನ ನಿಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ. ಕೆಲವರು ಭಯದಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ವಾರ ಗೌತಮಬುದ್ಧ ನಗರ ಆಡಳಿತ ಲಸಿಕೆ ಹೆಚ್ಚಿಸಲು ನಿರ್ಧಾರ ಕೈಗೊಂಡಿದ್ದು, ಇದು ಭಾರತದ ಮೊದಲ ಸಂಪೂರ್ಣ ಲಸಿಕೆ ಪಡೆದ ಜಿಲ್ಲೆಯಾಗಿದೆ. ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್.ವೈ. ಅವರ ಆದೇಶದಂತೆ ಎಲ್ಲಾ ಸಂಘ ಸಂಸ್ಥೆಗಳು, ಕಚೇರಿಗಳಲ್ಲಿ ಲಸಿಕಾ ಶಿಬಿರಗಳನ್ನು ನಡೆಸಲಾಯಿತು. ಸೆಕ್ಟರ್ 137 ಫೆಲಿಕ್ಸ್ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ವ್ಯಾಕ್ಸಿನೇಷನ್ ಕೇಂದ್ರ ತೆರೆದು ಲಸಿಕೆ ನೀಡಲಾಗಿದೆ.
ಉತ್ತರ ಪ್ರದೇಶದ ಎಟಾವಾದಲ್ಲಿ ಲಸಿಕೆ ಪಡೆದುಕೊಂಡವರಿಗೆ ಮಾತ್ರ ಮದ್ಯ ಮಾರಾಟ ಮಾಡುವ ಮೂಲಕ ವ್ಯಾಕ್ಸಿನೇಷನ್ ಗೆ ಉತ್ತೇಜನ ನೀಡಲಾಗಿದೆ.