ನವದೆಹಲಿ: ಕೊಯಮತ್ತೂರಿನ ವಾಯುಸೇನೆ ತರಬೇತಿ ಅಕಾಡೆಮಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಫಿಂಗರ್ ಟೆಸ್ಟ್ ಗೆ ಒಳಪಡಿಸಿಲ್ಲ ಎಂದು ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮಾಹಿತಿ ನೀಡಿದ್ದಾರೆ.
ವಾಯುಸೇನೆ ತರಬೇತಿ ಅಕಾಡೆಮಿಯಲ್ಲಿದ್ದ 28 ವರ್ಷದ ಮಹಿಳಾ ಅಧಿಕಾರಿ ಸೆಪ್ಟೆಂಬರ್ 10 ರಂದು ವಾಯುಸೇನೆ ಅಧಿಕಾರಿ ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು. ಪ್ರಕರಣ ಹಿಂಪಡೆಯುವಂತೆ ಮೇಲಿನ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ನಿಷೇಧಿತ ಫಿಂಗರ್ ಟೆಸ್ಟ್ ಗೆ ತಮ್ಮನ್ನು ಒಳಪಡಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ ವಾಯುಸೇನೆ ಆಂತರಿಕ ತನಿಖೆ ನಡೆಯುತ್ತಿದೆ. ಮಹಿಳಾ ಅಧಿಕಾರಿ ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಹೇಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಕಾನೂನು ಬಾಹಿರ ಎರಡು ಬೆರಳಿನ ಪರೀಕ್ಷೆಗೆ ಒಳಪಡಿಸಲಾಗಿದೆ ಎಂಬ ಸಂತ್ರಸ್ತೆಯ ಆರೋಪವನ್ನು ಅವರು ನಿರಾಕರಿಸಿದ್ದಾರೆ.