ಬೆಂಗಳೂರು : ರಾಜ್ಯ ಖಾಸಗಿ ಸಾರಿಗೆ ಅಸೋಸಿಯೇಷನ್ ಇಂದು ಸೋಮವಾರ ಬೆಂಗಳೂರಿನಲ್ಲಿ ‘ಬಂದ್’ ಘೋಷಿಸಿದ್ದು, ಪ್ರಯಾಣಿಕರಿಗೆ ತೊಂದರೆಯಾಗಲಿದೆ.ಈ ಹಿನ್ನೆಲೆ ಬಿಎಂಟಿಸಿ ಹೆಚ್ಚುವರಿಯಾಗಿ 500 ಬಿಎಂಟಿಸಿ ಬಸ್ ಬಿಡಲಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ.ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, , ಚನ್ನಸಂದ್ರ, ಹೊಸಕೋಟೆ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ/ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ಹೆಸರಘಟ್ಟ, ದೊಡ್ಡಬಳಾಪುರ, ದೇವನಹಳ್ಳಿ, ಬಾಗಲೂರು ಸೇರಿದಂತೆ ವಿವಿಧ ಕಡೆಗೆ 500 ಬಿಎಂಟಿಸಿ ಬಸ್ ಬಿಡಲಾಗಿದ್ದು, 4000 ಹೆಚ್ಚುವರಿ ಟ್ರಿಪ್ ಮಾಡಲು ಬಿಎಂಟಿಸಿ ನಿರ್ಧರಿಸಿದೆ.
ಸರ್ಕಾರಿ ಬಸ್ ಗಳಾದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಎಂದಿನಂತೆ ಸಂಚಾರ ಮಾಡಲಿದ್ದು, ಪ್ರಯಾಣಿಕರಿಗೆ ತೊಂದರೆ ಇರುವುದಿಲ್ಲ. ಆದರೆ ಆಟೋ, ಟ್ಯಾಕ್ಸಿ, ಕ್ಯಾಬ್ ಗಳು ಮಾತ್ರ ಸಿಗೋದಿಲ್ಲ. ಕರ್ನಾಟಕ ಖಾಸಗಿ ಶಾಲಾ ವಾಹನಗಳ ಯೂನಿಯನ್ ವತಿಯಿಂದ ಖಾಸಗಿ ಸಾರಿಗೆ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಈಗಾಗಲೇ ಅನೇಕ ಶಾಲೆಗಳು ರಜೆ ಘೋಷಣೆ ಮಾಡಿವೆ.