ಬೆಂಗಳೂರು : ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ರಾಜ್ಯದ ಬಿಜೆಪಿ ನಾಯಕರಿಗೆ ಕರ್ನಾಟಕದ ನೆಲದ ಮಣ್ಣು ಮತ್ತು ನೀರಿನ ಋಣ ಇದ್ದರೆ ದೆಹಲಿಗೆ ಹೋಗಿ ಕನ್ನಡಿಗರ ಬಗ್ಗೆ ಯಾಕಿಷ್ಟು ನಿಮಗೆ ದ್ವೇಷ? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಬೇಕು. ಪರಿಹಾರಕ್ಕಾಗಿ ಒತ್ತಾಯಿಸಿ ಪ್ರಧಾನಿ ಕಾರ್ಯಾಲಯದ ಮುಂದೆ ಧರಣಿ ಕೂರಬೇಕು. ಇವರ ಆಟಾಟೋಪಗಳೇನಿದ್ದರೂ ರಾಜ್ಯದಲ್ಲಿ ಮಾತ್ರ, ಇಲ್ಲಿ ಎಲ್ಲರು ಹುಲಿ-ಸಿಂಹಗಳೇ, ಪ್ರಧಾನಮಂತ್ರಿ, ಗೃಹಸಚಿವರನ್ನು ಕಂಡಕೂಡಲೇ ಬಾಲ ಮುದುರಿದ ಇಲಿಗಳಾಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬರಪರಿಹಾರದಲ್ಲಿ ಅನ್ಯಾಯ, ತೆರಿಗೆ ಪಾಲಿನಲ್ಲಿ ವಂಚನೆ, ಹಣಕಾಸು ಆಯೋಗದ ಅನುದಾನದಲ್ಲಿ ಮೋಸ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ ನೀಡದೆ ಅನ್ಯಾಯ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಒಂದೇ ಎರಡೇ? ಹೀಗಿದ್ದರೂ ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ. ಇವರೆಲ್ಲ ಯಾವ ಮುಖ ಹೊತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಕೇಳಲು ಜನರ ಬಳಿ ಹೋಗುತ್ತಾರೆ? ಇಂತಹವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ. ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ತಿಳಿದಿರಲಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.