ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕಾರಕ, ಅದನ್ನು ಇವತ್ತು ಬಿಡಬೇಕು, ನಾಳೆ ಬಿಡಬೇಕು ಎಂದು ಮನಸ್ಸಲ್ಲೇ ನಿರ್ಣಯ ತೆಗೆದುಕೊಂಡು, ಮತ್ತೆ ಬಾಯಿಗೆ ಸಿಗರೇಟು ಇಡುವವರ ಸಂಖ್ಯೆ ಜಾಸ್ತಿಯೇ ಇದೆ.
ಹೀಗೆ ಸಿಗರೇಟು ಸೇದುವುದನ್ನು ಬಿಡುವಂತೆ ಮಾಡಬೇಕು, ಸಿಗರೇಟು ಸೇದುವುದರಿಂದ ಆಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸಬೇಕು ಎಂದೇ ಪ್ರತಿ ವರ್ಷದ ಮಾರ್ಚ್ ಎರಡನೇ ಬುಧವಾರದಂದು ’ನೋ ಸ್ಮೋಕಿಂಗ್ ಡೇ’ ಆಚರಿಸಲಾಗುತ್ತದೆ. ಇದೇ ದಿನದ ನೆಪದಲ್ಲಿ ಹೇಗೆಲ್ಲ ಸಿಗರೇಟು ಸೇದುವುದನ್ನು ಬಿಡಬೇಕು ಎಂಬುದರ ಕುರಿತ ಕೆಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ಸಿಗರೇಟು ಸೇದುವುದು ರೂಢಿಯಾದ ಕಾರಣ ಬೆಳಗ್ಗೆ ಎದ್ದ ನಂತರದಿಂದ ಹಿಡಿದು ರಾತ್ರಿ ಮಲಗುವ ತನಕವೂ ಆಗಾಗ ಸೇದಬೇಕು ಎನಿಸುತ್ತದೆ. ಹೀಗೆ ಸೇದಬೇಕು ಎನಿಸಿದಾಗಲೆಲ್ಲ ಹಾಲು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಆಗ ಹಾಲು ಕುಡಿಯುವುದೇ ರೂಢಿಯಾಗಿ ಸಿಗರೇಟು ಬಿಡಲು ನೆರವಾಗುತ್ತದೆ.
ಹಾಗೆಯೇ, ನಿತ್ಯ ತರಕಾರಿ ಸೇವಿಸುವುದು, ಇಡೀ ದಿನ ಕೆಲಸದಲ್ಲಿ ನಿರತರಾಗಿರುವಂತೆ ನೋಡಿಕೊಳ್ಳುವುದು, ಏಕಾಏಕಿ ಸೇದುವುದನ್ನು ಬಿಡದೆ, ದಿನಕ್ಕೆ ಒಂದರಂತೆ ಕಡಿಮೆ ಮಾಡಿಕೊಳ್ಳುತ್ತ ಬಂದು ಕೊನೆಗೊಂದು ದಿನ ಸೇದದೆ ಇರುವುದು, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು, ಒಮ್ಮೆ ಬಿಟ್ಟ ನಂತರ ಮತ್ತೆ ಅದರ ತಂಟೆಗೆ ಹೋಗದಿರುವುದು, ಹೆಚ್ಚು ಹಣ್ಣು ತಿನ್ನುವುದು ಸೇರಿ ಹಲವು ರೂಢಿಗಳನ್ನು ಮಾಡಿಕೊಳ್ಳುವ ಮೂಲಕ ಸಿಗರೇಟು ಸೇವನೆಯಿಂದ ಮುಕ್ತಿ ಹೊಂದಬಹುದಾಗಿದೆ.
ಅಷ್ಟಕ್ಕೂ ಮನಸ್ಸಿನಲ್ಲಿ ಒಮ್ಮೆ ನಿಶ್ಚಯ ಮಾಡಿಕೊಂಡರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತನ್ನು ಆಗಾಗ ನೆನಪಿಸಿಕೊಂಡರೆ, ಸಿಗರೇಟನ್ನು ನಮ್ಮ ವೈರಿ ಎಂದು ಭಾವಿಸಿದರೆ ವ್ಯಸನದಿಂದ ನಾವು ಮುಕ್ತರಾಗಬಹುದಾಗಿದೆ. ಆರೋಗ್ಯವಂತರಾಗಿ ಜೀವನ ಸಾಗಿಸಬಹುದಾಗಿದೆ.