
ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಪಘಾತದ ಸ್ಥಳದಲ್ಲಿ ಜೀವವಿರುವ ಯಾವುದೇ ಕುರುಹು ಕಂಡುಬಂದಿಲ್ಲ ಎಂದು ಇರಾನ್ ರಾಜ್ಯ ದೂರದರ್ಶನ ಸೋಮವಾರ ಹೇಳಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್ ಸೇರಿ ಇತರರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ದೃಢಪಡಿಸಿದೆ.
ದುರಂತ ನಡೆದ ಸ್ಥಳವು ಕಡಿದಾದ ಕಣಿವೆಯಲ್ಲಿದೆ ಮತ್ತು ರಕ್ಷಕರು ಅದನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.
ರೈಸಿ, ದೇಶದ ವಿದೇಶಾಂಗ ಸಚಿವರು ಮತ್ತು ಇತರ ಅಧಿಕಾರಿಗಳನ್ನು ಹೊತ್ತ ಹೆಲಿಕಾಪ್ಟರ್ ಭಾನುವಾರ ಇರಾನ್‌ನ ಪರ್ವತ ವಾಯುವ್ಯ ಪ್ರದೇಶಗಳಲ್ಲಿ ಪತನಗೊಂಡಿದ್ದು, ಮಂಜು ಮುಸುಕಿದ ಕಾಡಿನಲ್ಲಿ ಭಾರಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.
ಸೋಮವಾರ ಸೂರ್ಯ ಉದಯಿಸುತ್ತಿದ್ದಂತೆ, ರಕ್ಷಕರು ಸುಮಾರು 1.25 ಮೈಲುಗಳಷ್ಟು ದೂರದಿಂದ ಹೆಲಿಕಾಪ್ಟರ್ ಅನ್ನು ನೋಡಿದ್ದಾರೆ ಎಂದು ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ಮುಖ್ಯಸ್ಥ ಪಿರ್ ಹೊಸೈನ್ ಕೊಲಿವಾಂಡ್ ರಾಜ್ಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆ ವೇಳೆಗೆ ಅವರು ನಾಪತ್ತೆಯಾಗಿ12 ಗಂಟೆ ಕಳೆದಿದೆ.
ಸೋಮವಾರ ಮುಂಜಾನೆ ಟರ್ಕಿಯ ಅಧಿಕಾರಿಗಳು ಹೆಲಿಕಾಪ್ಟರ್‌ನ ಅವಶೇಷಗಳು ಎಂದು ಶಂಕಿಸಲಾದ ದೃಶ್ಯ ತೋರಿಸಿದ್ದಾರೆ. ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ತೋರಿಸುವ ಡ್ರೋನ್ ತುಣುಕನ್ನು ಅವರು ನೀಡಿದ್ದಾರೆ.
ರೈಸಿ ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದರು. ಇರಾನ್ ರಾಜಧಾನಿ ಟೆಹ್ರಾನ್‌ನ ವಾಯುವ್ಯಕ್ಕೆ ಸುಮಾರು 600 ಕಿಲೋಮೀಟರ್(375 ಮೈಲುಗಳು) ದೂರದಲ್ಲಿರುವ ಅಜರ್‌ಬೈಜಾನ್ ರಾಷ್ಟ್ರದ ಗಡಿಯಲ್ಲಿರುವ ಜೋಲ್ಫಾ ಬಳಿ ಘಟನೆ ನಡೆದಿದೆ ಎಂದು ಸ್ಟೇಟ್ ಟಿವಿ ಹೇಳಿದೆ.