ಬೆಂಗಳೂರು: ಖಾಸಗಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ಬಾರಿ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಮತ್ತು ಪರೀಕ್ಷಾ ಕೇಂದ್ರಗಳು ಇರುವುದಿಲ್ಲ.
ಪರೀಕ್ಷೆಯಲ್ಲಿನ ಅಕ್ರಮ, ನಕಲು ಮಾಡುವುದನ್ನು ತಡೆಯಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಕ್ರಮ ಕೈಗೊಂಡಿದ್ದು, ಇತರೆ ವಿದ್ಯಾರ್ಥಿಗಳಿಗೆ ಸಿದ್ಧಪಡಿಸುವ ಪ್ರಶ್ನೆ ಪತ್ರಿಕೆಗಳನ್ನು ಖಾಸಗಿ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಿದೆ.
ಹೊಸಬರು, ಪುನರಾವರ್ತಿತರು ಸೇರಿ ಪ್ರತಿವರ್ಷ ಸುಮಾರು 40 ಸಾವಿರ ಖಾಸಗಿ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಶಾಲೆಗೆ ಹೋಗಿ ಇತರೆ ವಿದ್ಯಾರ್ಥಿಗಳಂತೆ ಅವರು ಶಿಕ್ಷಣ ಪಡೆಯದ ಕಾರಣ ಸುಲಭದ ಪ್ರಶ್ನೆಗಳ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲಾಗುತ್ತಿತ್ತು. ಅವರ ಸಂಖ್ಯೆಗಳಿಗೆ ಅನುಗುಣವಾಗಿ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ತೆರೆದು ಪರೀಕ್ಷೆ ಬರೆಸಲಾಗುತ್ತಿತ್ತು.
2023ರ ಪರೀಕ್ಷೆಯಲ್ಲಿ ಖಾಸಗಿ ಅಭ್ಯರ್ಥಿಗಳಿಗೆ ಮೀಸಲಾದ ಪರೀಕ್ಷಾ ಕೇಂದ್ರಗಳಲ್ಲಿ ಭಾರಿ ಪ್ರಮಾಣದಲ್ಲಿ ನಕಲು ನಡೆದ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಏಕ ರೀತಿಯ ವ್ಯವಸ್ಥೆ ಮಾಡಲು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧಾರ ಕೈಗೊಂಡಿದೆ. ಈ ಬಾರಿ ಖಾಸಗಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಶ್ನೆ ಪತ್ರಿಕೆ, ಪರೀಕ್ಷಾ ಕೇಂದ್ರ ಇರುವುದಿಲ್ಲ ಎಂದು ಹೇಳಲಾಗಿದೆ.