ನವದೆಹಲಿ: ಕೊರೋನಾ ವಿರುದ್ಧ ಬೂಸ್ಟರ್ ಲಸಿಕೆ ಅಗತ್ಯ ಎನ್ನುವುದನ್ನು ಸಾಬೀತು ಮಾಡುವಂತಹ ವೈಜ್ಞಾನಿಕ ಪುರಾವೆಗಳು ಇದುವರೆಗೂ ದೊರೆತಿಲ್ಲ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ.
ಕೊರೊನಾ ವಿರುದ್ಧ 2 ಡೋಸ್ ಲಸಿಕೆ ಪಡೆದುಕೊಂಡವರಿಗೆ ಮೂರನೆಯದಾಗಿ ಬೂಸ್ಟರ್ ಡೋಸ್ ನಿಂದ ರಕ್ಷಣೆ ಸಿಗುತ್ತದೆ ಎಂಬುದಕ್ಕೆ ಪುರಾವೆ ದೊರೆತಿಲ್ಲ. ಎರಡನೇ ಡೋಸ್ ಲಸಿಕೆ ಪಡೆಯದವರಿಗೆ ಲಸಿಕೆ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೂಸ್ಟರ್ ಡೋಸ್ ಬಗ್ಗೆ ವೈಜ್ಞಾನಿಕ ಆಧಾರವಿಲ್ಲ. ದೇಶದಲ್ಲಿ ಎರಡನೇ ಡೋಸ್ ನೀಡಲು ಹೆಚ್ಚಿನ ಒತ್ತು ಕೊಡಲಾಗಿದೆ. ಇನ್ನು ಬೂಸ್ಟರ್ ಡೋಸ್ ವಿಚಾರದಲ್ಲಿ ಸರ್ಕಾರ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ತಜ್ಞರ ವರದಿ ಶಿಫಾರಸಿನ ನಂತರವೇ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಲಸಿಕೆ ಸಂಶೋಧನೆಯಿಂದ ಹಿಡಿದು ವಿತರಣೆಯವರೆಗೆ ಎಲ್ಲ ವಿಷಯದಲ್ಲಿಯೂ ಪ್ರಧಾನಿಯವರು ತಜ್ಞರ ಸಮಿತಿ ಸಲಹೆ, ಶಿಫಾರಸುಗಳಿಗೆ ಒತ್ತು ನೀಡಿದ್ದಾರೆ.
ಇನ್ನು ಬೂಸ್ಟರ್ ಡೋಸ್ ನೀಡಿಕೆ ಕುರಿತಂತೆ ಮುಂದೆ ನಡೆಯಲಿರುವ ತಜ್ಞರ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಈಗ ದೇಶದಲ್ಲಿ ಅಗತ್ಯವಿರುವಷ್ಟು ಲಸಿಕೆ ಲಭ್ಯವಿದ್ದು, ಎಲ್ಲ ವಯಸ್ಕರಿಗೆ ಎರಡು ಡೋಸ್ ಲಸಿಕೆ ನೀಡುವ ಗುರಿಯನ್ನು ಪೂರ್ಣಗೊಳಿಸಲಾಗುವುದು. ನಂತರ ಬೂಸ್ಟರ್ ಡೋಸ್ ಬಗ್ಗೆ ಚಿಂತನೆ ನಡೆಸಬಹುದು ಎಂದು ಹೇಳಲಾಗಿದೆ.