ನವದೆಹಲಿ: ರಾಜ್ಯಗಳ ನಡುವೆ ಆಮ್ಲಜನಕ ಪೂರೈಕೆಗೆ ಯಾವುದೇ ನಿರ್ಬಂಧ ಹೇರಬಾರದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಆಮ್ಲಜನಕ ಸಾಗಣೆಗೆ ಪೂರಕವಾಗಿ ಆಮ್ಲಜನಕ ಸಾಗಿಸುವ ವಾಹನಗಳ ಅಂತರಾಜ್ಯ ಸಂಚಾರಕ್ಕೆ ಅವಕಾಶ ನೀಡುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕೇಂದ್ರ ಗೃಹ ಮಂತ್ರಾಲಯದ ಆದೇಶದ ಅನ್ವಯ, ಯಾವುದೇ ನಿರ್ದಿಷ್ಟ ಜಿಲ್ಲೆ ಅಥವಾ ಪ್ರದೇಶಗಳಿಗೆ ಆಮ್ಲಜನಕ ಪೂರೈಕೆ ಮಾಡಲು ಆಯಾ ಪ್ರದೇಶದ ಮೂಲಕ ಆಮ್ಲಜನಕ ಪೂರೈಕೆ ವಾಹನ ಹಾದು ಹೋಗಲು ಪ್ರಾಧಿಕಾರದ ಅನುಮತಿ ಅಗತ್ಯವಿರುವುದಿಲ್ಲ.
ಆಮ್ಲಜನಕ ತಯಾರಕರು ಮತ್ತು ಸರಬರಾಜುದಾರರು ಇರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಆಸ್ಪತ್ರೆಗಳಿಗೆ ಮಾತ್ರ ಆಮ್ಲಜನಕ ಪೂರೈಕೆ ಮಾಡಲು ಯಾವುದೇ ನಿರ್ಬಂಧ ವಿಧಿಸಬಾರದು. ರಾಜ್ಯಗಳು ಆಮ್ಲಜನಕ ಸರಬರಾಜಿಗೆ ಯಾವುದೇ ನಿರ್ಬಂಧ ಹೇರಬಾರದು ಎಂದು ಹೇಳಲಾಗಿದೆ.
ಅಗತ್ಯತೆಗೆ ಅನುಗುಣವಾಗಿ ಆಮ್ಲಜನಕ ಸಾಗಿಸುವ ವಾಹನಗಳ ಅಂತರರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡುವಂತೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆಮ್ಲಜನಕ ಪೂರೈಕೆ ವಾಹನಗಳಿಗೆ ಭದ್ರತೆ ಒದಗಿಸಬೇಕು. ಇದಕ್ಕಾಗಿ ಕಾರಿಡಾರ್ ರಚಿಸುವಂತೆ ಕೇಂದ್ರದಿಂದ ನಿರ್ದೇಶನ ನೀಡಲಾಗಿದೆ.