ನವದೆಹಲಿ: ಮೋದಿ ಸರ್ಕಾರ ಜಾರಿಗೆ ತಂದಿದ್ದ ಅನಾಮಧೇಯ ಚುನಾವಣಾ ಬಾಂಡ್ ಗಳ ಯೋಜನೆಯನ್ನು ರದ್ದುಗೊಳಿಸಿದ ಫೆಬ್ರವರಿ 15ರ ತೀರ್ಪನ್ನು ಮರು ಪರಿಶೀಲಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ, ಮನೋಜ್ ಮಿಶ್ರಾಯ ಅವರ ಪೀಠವು ತೀರ್ಪಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದೆ.
ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ಪಟ್ಟಿ ಮಾಡುವಂತೆ ಸಲ್ಲಿಸಿದ ಕೋರಿಕೆಯನ್ನೂ ಕೂಡ ತಿರಸ್ಕರಿಸಲಾಗಿದೆ. ಸೆಪ್ಟಂಬರ್ 25ರಂದು ಈ ಆದೇಶವಾಗಿದ್ದು, ಇದನ್ನು ಶನಿವಾರ ಅಪ್ಲೋಡ್ ಮಾಡಲಾಗಿದೆ.
2018 ರಲ್ಲಿ ಜಾರಿಗೆ ತಂದಿದ್ದ ಚುನಾವಣಾ ಬಂಡ್ ಯೋಜನೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮಾಹಿತಿ ಹಕ್ಕು ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ ಫೆಬ್ರವರಿ 15ರಂದು ಅನಾಮಧೇಯ ಚುನಾವಣಾ ಬಾಂಡ್ ಗಳ ಯೋಜನೆಯನ್ನು ರದ್ದು ಮಾಡಿತ್ತು.