ಖಾಸಗೀಕರಣ ಎನ್ನುವ ಪದ ಇತ್ತೀಚಿಗೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಮೋದಿ ಸರ್ಕಾರ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂಬ ಮಾತು ಸಹ ಇದೆ. ಈ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ಖಾಸಗೀಕರಣವಾಗಲಿದೆ ಎಂಬ ಊಹಾಪೋಹಗಳು ಇವೆ. ರೈಲ್ವೇಯ ಖಾಸಗೀಕರಣದ ವಿಷಯವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
ಸೋಮವಾರ ತಳ್ಳಿಹಾಕಿದ್ದಾರೆ.
ಖಾಸಗಿ ಮಾಧ್ಯಮವೊಂದರಲ್ಲಿ ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್ ಬಗೆಗಿನ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಡಬಲ್-ಎಂಜಿನ್ ಗ್ರೋತ್ ಮಾಡೆಲ್ ಕುರಿತು ಮಾತನಾಡಿದ್ದಾರೆ. ಭಾರತೀಯ ರೈಲ್ವೇಯ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ಇನ್ನು ಮುಂದೆಯೂ ಸರ್ಕಾರ ಪ್ರಮುಖ ಪಾತ್ರ ವಹಿಸಲಿದೆ. ಇಂಡಿಯನ್ ರೈಲ್ವೇಯನ್ನು ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ವೈಷ್ಣವ್ ಹೇಳಿದ್ದಾರೆ.
ಇದೇ ವೇಳೆ ಭಾರತೀಯ ರೈಲ್ವೇ ಅಭಿವೃದ್ಧಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ಇರುವ ದೃಷ್ಟಿಕೋನವನ್ನು ತಿಳಿಸಿದ ಅಶ್ವಿನಿ ವೈಷ್ಣವ್, ಪ್ರಧಾನಿಯವರು ಪ್ರಯಾಣಿಕರ ಅನುಭವವನ್ನು ಬದಲಾಯಿಸುವ ಕನಸು ಹೊಂದಿದ್ದಾರೆ. ರೈಲ್ವೇ ನಿಲ್ದಾಣಗಳ ದೊಡ್ಡ ಪ್ರಮಾಣದ ಅಭಿವೃದ್ಧಿ, ಹೊಸ ತಲೆಮಾರಿನ ರೈಲುಗಳು ಮತ್ತು ಪ್ರಯಾಣಿಕರ ಸುರಕ್ಷತೆ ಎಂಬ ಮೂರು ಹಂತಗಳ ಮೇಲೆ ಸರ್ಕಾರ ಗಮನ ಹರಿಸುತ್ತಿದೆ ಎಂದು ತಿಳಿಸಿದ್ದಾರೆ.