ನವದೆಹಲಿ: ಅಮೆರಿಕದ ಡಾಲರ್ ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ ಆರಂಭಿಸುವ ಪ್ರಸ್ತಾವನೆ ಇಲ್ಲ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ.
ಕತಾರ್‌ನ ರಾಜಧಾನಿಯಲ್ಲಿ ದೋಹಾ ಫೋರಂ ಉದ್ದೇಶಿಸಿ ಮಾತನಾಡಿದ ಅವರು, ಬ್ರಿಕ್ಸ್ ದೇಶಗಳು ಯುಎಸ್ ಡಾಲರ್ ಅನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿಲ್ಲ. ಬ್ರಿಕ್ಸ್ ರಾಷ್ಟ್ರಗಳು ಈ ವಿಷಯದಲ್ಲಿ ಏಕರೂಪದ ನಿಲುವನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳು ಸಾಮಾನ್ಯ ಕರೆನ್ಸಿಯ ಯೋಜನೆಗಳೊಂದಿಗೆ ಮುಂದುವರಿದರೆ 100 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಯುಎಸ್ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಒಂದು ವಾರದ ನಂತರ ಜೈಶಂಕರ್ ಅವರ ಪ್ರತಿಕ್ರಿಯೆ ಬಂದಿದೆ.
ಕತಾರ್ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅವರ ಆಹ್ವಾನದ ಮೇರೆಗೆ ದೋಹಾ ಫೋರಂನಲ್ಲಿ ಪಾಲ್ಗೊಳ್ಳಲು ಜೈಶಂಕರ್ ದೋಹಾಕ್ಕೆ ಆಗಮಿಸಿದ್ದರು. ಅವರು ಕತಾರ್ ಪ್ರಧಾನ ಮಂತ್ರಿ ಮತ್ತು ನಾರ್ವೆಯ ವಿದೇಶಾಂಗ ಸಚಿವ ಎಸ್ಪೆನ್ ಬಾರ್ತ್ ಈಡೆ ಅವರೊಂದಿಗೆ ಸಮಿತಿಯಲ್ಲಿ ಮಾತನಾಡುತ್ತಿದ್ದ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.