ಮದುವೆ ಆಗಲ್ಲ ಅನ್ನೋದಕ್ಕೆ ಕಾರಣಗಳು ನೂರಾರು. ನಿಶ್ಚಿತಾರ್ಥ ಮುಗಿದು, ಇನ್ನೇನು ಮಂಟಪ ಹತ್ತಿದ ಮೇಲೂ ಮದುವೆ ನಿಂತ ನೂರಾರು ಉದಾಹರಣೆಗಳಿವೆ.
ಮದ್ಯಪಾನ ಮಾಡಿ ಬಂದ, ಕುತ್ತಿಗೆಗೆ ವರನ ಕೈ ತಾಗಿತು, ವರ ಇನ್ಯಾವುದೋ ಯುವತಿಯನ್ನು ನೋಡಿದ, ಹೀಗೆ ಹತ್ತು ಹಲವು ಕಾರಣಗಳು. ಇತ್ತೀಚೆಗೆ ಹೊಸ ಹೊಸ ಕಾರಣಗಳು ಗಮನ ಸೆಳಯುತ್ತಿವೆ. ಉತ್ತರ ಪ್ರದೇಶದಲ್ಲಿ ವರನ ಕಡೆಯವರು ಫೋಟೋಗ್ರಾಫರ್ ಅನ್ನು ಅರೇಂಜ್ ಮಾಡಿಲ್ಲ ಎಂದು ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಿರಳ ವಿದ್ಯಮಾನ ನಡೆದಿದೆ.
ಕಾನ್ಪುರ ದೇಹತ್‌ನ ಮಂಗಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರೈತನ ಮಗಳ ಮದುವೆಯನ್ನು ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ನಿಗದಿಪಡಿಸಲಾಗಿತ್ತು. ಸಕಲ ಸಿದ್ಧತೆಗಳು ನಡೆದಿದ್ದು, ಮದುವೆ ಮೆರವಣಿಗೆ ಬಂದಾಗ ‘ಜಯಮಾಲ’ ಸಮಾರಂಭಕ್ಕೆ ಮದುವೆ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಆದಾಗ್ಯೂ, ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕ ಇಲ್ಲ ಎಂಬುದು ವಧುವಿಗೆ ಗೊತ್ತಾಯಿತು. ಕೂಡಲೇ ಆಕೆ, ಮದುವೆ ನಿರಾಕರಿಸಿ ವೇದಿಕೆಯಿಂದ ಎದ್ದು ಸಮೀಪದಲ್ಲಿದ್ದ ಮನೆಯೊಳಕ್ಕೆ ನಡೆದಳು. ಎಲ್ಲರೂ ಹುಡುಗಿಯ ಮನವೊಲಿಸಲು ತುಂಬಾ ಪ್ರಯತ್ನಿಸಿದರು.
ಮನವೊಲಿಕೆ ಪ್ರಯತ್ನಿಸಿದವರಲ್ಲಿ ಆಕೆ ಹೇಳಿದ್ದಿಷ್ಟು – “ಇಂದು ನಮ್ಮ ಮದುವೆಯ ಬಗ್ಗೆ ಕಾಳಜಿ ವಹಿಸದ ವ್ಯಕ್ತಿ ಮುಂದೆ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ?”. ಕುಟುಂಬದ ಹಿರಿಯರೂ ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ವ್ಯರ್ಥವಾಯಿತು. ಇದಾದ ಬಳಿಕ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿನಿಮಯ ಮಾಡಿಕೊಂಡ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಹಾಗೆ “ಫೋಟೋಗ್ರಾಫರ್” ಕಾರಣಕ್ಕೆ ಮದುವೆಯೊಂದು ಮುರಿದುಬಿತ್ತು.