ಜಾರ್ಖಂಡ್‌ನ ಜಮ್ಷೆಡ್ಪುರದ 11 ವರ್ಷದ ಬಾಲಕಿ ತುಳ್ಸಿ ಕುಮಾರಿಗೆ ವ್ಯಕ್ತಿಯೊಬ್ಬರು 10,000 ರೂಪಾಯಿ/ಮಾವಿನ ಹಣ್ಣಿನಂತೆ 1,20,000 ರೂ.ಗಳನ್ನು ಕೊಟ್ಟು ಒಂದು ಡಜ಼ನ್ ಮಾವಿನ ಹಣ್ಣುಗಳನ್ನು ಖರೀದಿ ಮಾಡಿದಾಗ ತನ್ನನ್ನು ತಾನು ನಂಬಲೇ ಆಗಲಿಲ್ಲ.
ಆನ್ಲೈನ್ ಕ್ಲಾಸ್‌ಗಳಿಗೆ ವ್ಯವಸ್ಥೆ ಮಾಡುವ ವ್ಯಾಲುಬಲ್ ಎಜುಟೇನ್ಮೆಂಟ್ ಪ್ರೈ. ಲಿ.ನ ವ್ಯವಸ್ಥಾಪಕ ನಿರ್ದೇಶಕ ಅಮೆಯಾ ಅವರು ಆ ’ಅಂಕಲ್’ ಆಗಿದ್ದಾರೆ. ಬಾಲಕಿಯ ತಂದೆ ಶ್ರೀಮಲ್ ಕುಮಾರ್‌ರ ಖಾತೆಗೆ 1,20,000 ರೂ.ಗಳನ್ನು ಹಾಕಿದ ಅಮೆಯಾ, ತುಳ್ಸಿ ಕುಟುಂಬಕ್ಕೆ ನೆರವಾಗಲು ಮುಂದೆ ಬಂದಿದ್ದಾರೆ.
ಜಮ್ಷೆಡ್ಪುರದ ರಸ್ತೆ ಬದಿಯಲ್ಲಿ ಮಾವಿನ ಹಣ್ಣು ಮಾರುತ್ತಾ ಆನ್ಲೈನ್‌ನಲ್ಲಿ ಅಧ್ಯಯನ ಮಾಡಲು ಕಾಸು ಕೂಡಿಡುವುದಾಗಿ ತುಳ್ಸಿ ಚಾನೆಲ್ ಒಂದರಲ್ಲಿ ಹೇಳಿದ್ದಳು.
ತುಳ್ಸಿಯ ದಿಟ್ಟತನ ಹಾಗೂ ಸ್ವಾಭಿಮಾನ ಕಂಡು ಫಿದಾ ಆದ ಅಮೆಯಾ, “ಆಕೆ ತನ್ನ ಹಣೆಬರಹವನ್ನು ದೂರುತ್ತಾ ಕೂರಲಿಲ್ಲ ಅಥವಾ ಭಿಕ್ಷೆ ಬೇಡಲಿಲ್ಲ. ಇದೇ ಕಾರಣದಿಂದ ನಾವು ಆಕೆಯಿಂದ ಮಾವಿನಹಣ್ಣುಗಳನ್ನು ಖರೀದಿ ಮಾಡಿದ್ದೇವೆ, ಯಾವುದೇ ದೇಣಿಗೆ ಕೆಲಸ ಮಾಡಿಲ್ಲ. ಇದು ಕೇವಲ ಕೆಲಸದ ಮೇಲೆ ಆಕೆಯ ಶ್ರದ್ಧೆಯನ್ನು ಹಾಗೂ ಆಕೆಯನ್ನು ಮೆಚ್ಚಲು ಅಲ್ಲ, ಜೀವನದಲ್ಲಿ ಹೋರಾಡುವುದನ್ನು ಬಿಡಬೇಡಿ ಎಂದು ಪ್ರೋತ್ಸಾಹ ನೀಡಲು” ಎಂದಿದ್ದಾರೆ.