ನವದೆಹಲಿ: ಮಾಧ್ಯಮದ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ ಎಂದು ಸಿಡಬ್ಲ್ಯೂಸಿ ಸಭೆಯಲ್ಲಿ 23 (ಜಿ-23) ನಾಯಕರಿಗೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಅಲ್ಲದೆ ಅವರು ಫ್ರಾಂಕ್ನೆಸ್ ಅನ್ನು ಮೆಚ್ಚುವುದಾಗಿ ಹೇಳಿದ್ದಾರೆ.
“ನಾನು ಯಾವಾಗಲೂ ಫ್ರಾಂಕ್ನೆಸ್ ಅನ್ನು ಮೆಚ್ಚಿದ್ದೇನೆ. ಮಾಧ್ಯಮಗಳ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ. ಆದ್ದರಿಂದ ನಾವೆಲ್ಲರೂ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಯನ್ನು ಮಾಡೋಣ. ಆದರೆ, ಈ ಕೊಠಡಿಯ ನಾಲ್ಕು ಗೋಡೆಗಳ ಹೊರಗೆ ಏನು ಸಂವಹನ ನಡೆಸಬೇಕು ಎಂಬುದು ಕಾಂಗ್ರೆಸ್ ಕಾರ್ಯತಂತ್ರದ ಸಾಮೂಹಿಕ ನಿರ್ಧಾರವಾಗಿದೆ” ಎಂದು ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಚೇರಿಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ, ಕಾಂಗ್ರೆಸ್‌ನ 23 ಸದಸ್ಯರ (ಜಿ -23) ನಿಯೋಗವು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಿಗೆ ಪತ್ರ ಬರೆದು ಸಾಂಸ್ಥಿಕ ಸುಧಾರಣೆಗಳಿಗಾಗಿ ಒತ್ತಾಯಿಸಿತ್ತು. “ನಿಸ್ಸಂದೇಹವಾಗಿ, ನಾವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದರೆ, ನಾವು ಒಗ್ಗಟ್ಟಾಗಿದ್ದರೆ, ನಾವು ಶಿಸ್ತುಬದ್ಧವಾಗಿದ್ದರೆ ಮತ್ತು ಪಕ್ಷದ ಹಿತಾಸಕ್ತಿಗಳ ಮೇಲೆ ಮಾತ್ರ ಗಮನ ಹರಿಸಿದರೆ, ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಎಂಬ ವಿಶ್ವಾಸವಿದೆ. ಆಯಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ನಮಗೆ ಮಾಹಿತಿ ನೀಡುತ್ತಾರೆ. ಹಾಗಾಗಿ ಈ ವಿಷಯದ ಬಗ್ಗೆ ನಾನು ಈಗ ಹೆಚ್ಚಿಗೆ ಏನನ್ನೂ ಹೇಳಲು ಇಷ್ಟಪಡುವುದಿಲ್ಲ” ಎಂದು ಸೋನಿಯಾ ಗಾಂಧಿ ಸಭೆಯಲ್ಲಿ ಹೇಳಿದ್ದಾರೆ.
ಇನ್ನು ಸೋನಿಯಾ ಗಾಂಧಿ ಅವರು ತಮ್ಮನ್ನು ‘ಪೂರ್ಣಾವಧಿ ಮತ್ತು ಪಕ್ಷದ ಮುಖ್ಯಸ್ಥೆ’ ಎಂದು ಸಭೆಯಲ್ಲಿ ಹೇಳಿದ್ದಾರೆ. ಈ ಹಿಂದೆ, ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್, ಜಿ -23 ಸದಸ್ಯರಾಗಿದ್ದು, ಅಧ್ಯಕ್ಷರಿಲ್ಲದ ಕಾರಣ ಪಕ್ಷದಲ್ಲಿ ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಪಕ್ಷದ ನಾಯಕರಿಗೆ ತಿಳಿದಿಲ್ಲ ಎಂದು ಹೇಳಿದ್ದರು.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಸೋಲಿನ ಜವಾಬ್ದಾರಿಯನ್ನು ಸ್ವೀಕರಿಸಿದ ರಾಹುಲ್ ಗಾಂಧಿ ಅವರು, ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಸೋನಿಯಾ ಗಾಂಧಿಯನ್ನು ಸಿಡಬ್ಲ್ಯುಸಿ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿದೆ.