ಬೆಂಗಳೂರು: ಅಪರಾಧ ದಂಡ ಸಂಹಿತೆಯಲ್ಲಿ ಬ್ಯಾಂಕ್ ಮ್ಯಾನೇಜರ್ ವಿಚಾರಣೆಗೆ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೆಂಗಳೂರಿನ ವಿಜಯ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಚಂದ್ರಶೇಖರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂಕೋರ್ಟ್ ಪ್ರಕರಣವೊಂದರ ಉಲ್ಲೇಖಿಸಿ ಬ್ಯಾಂಕ್ ಮ್ಯಾನೇಜರ್ ಸಾರ್ವಜನಿಕ ಸಿಬ್ಬಂದಿಯಾಗಿದ್ದರೂ ಸಿಆರ್ಪಿಸಿ ಸೆಕ್ಷನ್ 197 ಅವರಿಗೆ ಅನ್ವಯವಾಗುವುದಿಲ್ಲ. ಬ್ಯಾಂಕ್ ಮ್ಯಾನೇಜರ್ ನನ್ನು ಸಕ್ಷಮ ಪ್ರಾಧಿಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ವಜಾಗೋಳಿಸಬಹುದಾಗಿದೆ ಎಂದು ಆದೇಶಿಸಿದೆ ಎಂದು ನ್ಯಾಯ ಪೀಠ ತಿಳಿಸಿದೆ,
ವಿಚಾರಣಾ ನ್ಯಾಯಾಲಯದಲ್ಲಿ ಪ್ರಕ್ರಿಯೆ ಆರಂಭವಾಗುವ ಮೊದಲೇ ಚಂದ್ರಶೇಖರನನ್ನು ಸೇವೆಯಿಂದ ವಜಾ ಮಾಡಿರುವ ಹಿನ್ನೆಲೆಯಲ್ಲಿ ಅವರು ಸಾರ್ವಜನಿಕ ಸಿಬ್ಬಂದಿಯಾಗಿ ಉಳಿದಿಲ್ಲ. ಹೀಗಾಗಿ ವಿಚಾರಣೆ ಮುಂದುವರಿಸಬಹುದು ಎಂದು ಹೈಕೋರ್ಟ್ ಸೂಚಿಸಿದೆ.
ಅರ್ಜಿದಾರ ಮತ್ತು ಇತರೆ 7 ಮಂದಿ ವಿರುದ್ಧ 2016ರಲ್ಲಿ ವಂಚನೆ, ನಕಲಿ ದಾಖಲೆ, ಕ್ರಿಮಿನಲ್ ದುರ್ನಡತೆ ಪ್ರಕರಣ ದಾಖಲಾಗಿತ್ತು, ಅವರು ನಕಲಿ ದಾಖಲೆ ಆಧರಿಸಿ ಎಂಎಸ್ಎಲ್, ರಾಜೀವ್ ಗಾಂಧಿ ಆರೋಗ್ಯ ವಿವಿ ಠೇವಣಿ ಹಣವನ್ನು ಪ್ರಿನ್ಸ್ ಲಿಂಕ್ಸ್ ಮತ್ತು ಜೆಎಂಜೆ ಎಂಟರ್ಪ್ರೈಸಸ್ ಗೆ ವರ್ಗಾವಣೆ ಮಾಡಿದ್ದರು. ಇದರಿಂದ 22.5 ಕೋಟಿ ರೂ ನಷ್ಟವಾಗಿತ್ತು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ನಡೆದಿತ್ತು. ಹೈಕೋರ್ಟ್ ವಿಚಾರಣೆಗೆ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಆದೇಶಿಸಿದೆ.