ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ನಮ್ಮೊಂದಿಗೆ ಯಾವುದೇ ರಾಷ್ಟ್ರೀಯ ಪಕ್ಷ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದಾರೆ.
ಪ್ರಬಲ ರಾಷ್ಟ್ರೀಯ ಪಕ್ಷ ತನ್ನ ಗುಂಪಿನ ಶಾಸಕರನ್ನು ಬೆಂಬಲಿಸುತ್ತಿದೆ ಎಂದು ಹೇಳಿಕೊಂಡ ಒಂದು ದಿನದ ನಂತರ, ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಶುಕ್ರವಾರ ಯಾವುದೇ ರಾಷ್ಟ್ರೀಯ ಪಕ್ಷವು ತಮ್ಮೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ತನ್ನ ಗುಂಪನ್ನು ಬೆಂಬಲಿಸುತ್ತಿದೆಯೇ ಎಂಬ ಪ್ರಶ್ನೆಗೆ ಟಿವಿ ಚಾನೆಲ್ ಗೆ ಪ್ರತಿಕ್ರಿಯಿಸಿದ ಶಿಂಧೆ, ದೊಡ್ಡ ಶಕ್ತಿಯು ನಮ್ಮನ್ನು ಬೆಂಬಲಿಸುತ್ತಿದೆ ಎಂದು ನಾನು ಹೇಳಿದ್ದರಲ್ಲಿ ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಶಕ್ತಿಯನ್ನು ಅರ್ಥೈಸಿದ್ದೆ ಎಂದು ಮಾತು ಬದಲಿಸಿದ್ದಾರೆ.
ಗುರುವಾರ ಸಂಜೆ ಶಿಂಧೆ ಅವರ ಸಹಾಯಕರು ಬಿಡುಗಡೆ ಮಾಡಿದ ವಿಡಿಯೊದಲ್ಲಿ ಅವರು, ಬಂಡಾಯ ಶಾಸಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ರಾಷ್ಟ್ರೀಯ ಪಕ್ಷದ ಬೆಂಬಲ ಇದೆ. ಏನೇ ಆಗಲಿ ನಾವು ಗೆಲ್ಲುತ್ತೇವೆ. ನೀವು ಹೇಳಿದಂತೆ ಅದು ರಾಷ್ಟ್ರೀಯ ಪಕ್ಷ, ಸೂಪರ್ ಪವರ್ ಪಕ್ಷ, ಪಾಕಿಸ್ತಾನ ಮಣಿಸಿದ ಪಕ್ಷ ಎಂದು ಹೇಳಿದ್ದರು.
ನಾವು ತೆಗೆದುಕೊಂಡ ನಿರ್ಧಾರ ಐತಿಹಾಸಿಕವಾಗಿದೆ ಎಂದು ಅವರು ನನಗೆ ಹೇಳಿದ್ದಾರೆ, ನಿಮಗೆ ಏನಾದರೂ ಅಗತ್ಯವಿದ್ದರೆ, ನಾವು ನಿರಾಸೆಗೊಳಿಸುವುದಿಲ್ಲ. ನಮಗೆ ಯಾವುದೇ ಸಹಾಯ ಬೇಕಾದಾಗ ಅವರು ಬೆಂಬಲಕ್ಕೆ ಬರುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ಬೆಂಬಲ ಇದೆ ಎಂದು ಹೇಳಿದ್ದರು. ಇಂದು ಹೇಳಿಕೆ ಬದಲಿಸಿದ ಶಿಂಧೆ, ನಮಗೆ ಯಾವುದೇ ರಾಷ್ಟ್ರೀಯ ಪಕ್ಷದ ಸಂಪರ್ಕವಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.