ಬೆಂಗಳೂರು: ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡುವಿನಲ್ಲಿ ಇನ್ಮುಂದೆ ಕೆ.ಎಂ.ಎಫ್ ನ ನಂದಿನಿ ತುಂಪ್ಪದ ಘಮ ಇರಲ್ಲ. ಕಳೆದ 50 ವರ್ಷಗಳಿಂದ ತಿಮ್ಮಪ್ಪನ ಲಡ್ಡುವಿನ ರುಚಿಗಾಗಿ ಬಳಸುತ್ತಿದ್ದ ನಂದಿನಿ ತುಪ್ಪ ಇನ್ಮುಂದೆ ಲಡ್ಡುವಿನಲ್ಲಿ ಸಿಗುವುದಿಲ್ಲ. ಅಷ್ಟಕ್ಕೂ ಇಂತದ್ದೊಂದು ನಿರ್ಧಾರ ಕೈಗೊಳ್ಳಲು ಕಾರಣವೇನು? ಇಲ್ಲಿದೆ ಮಾಹಿತಿ.
ತುರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೂ ಕರ್ನಾಟಕದ ನಂದಿನಿ ತುಪ್ಪಕ್ಕೂ ಅವಿನಾಭಾವ ಸಂಬಂಧ. 50 ವರ್ಷಗಳಿಂದ ತಿರುಪತಿ ಲಡ್ಡು ತಯಾರಿಕೆಯಲ್ಲಿ ನಂದಿನಿ ತುಪ್ಪವನ್ನು ವಿಶೇಷವಾಗಿ ಬಳಸಲಾಗುತ್ತಿತ್ತು. ಆದರೆ ಈ ಪದ್ಧತಿಗೆ ಈಗ ಫುಲ್ ಸ್ಟಾಪ್ ಹಾಕಲಾಗುತ್ತಿದೆ.
ಇಷ್ಟು ವರ್ಷಗಳ ಕಾಲ ತಿರುಪತಿ ಲಡ್ಡು ತಯಾರಿಕೆಗಾಗಿ ಕಳುಹಿಸಲಾಗುತ್ತಿದ್ದ ನಂದಿನಿ ತುಪ್ಪವನ್ನು ಇನ್ಮುಂದೆ ಕಳುಹಿಸಲು ಆಗುವುದಿಲ್ಲ ಎಂದು ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ. ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ಬೇಕು. ಇಷ್ಟು ತುಪ್ಪವನ್ನು ದೇವಸ್ಥಾನಕ್ಕೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಕೆ.ಎಂ.ಎಫ್ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ಟೆಂಡರ್ ಕೈಬಿಟ್ಟಿದೆ. ಹಾಗಾಗಿ ಕಡಿಮೆ ಬೆಲೆಯಲ್ಲಿ ನಂದಿನಿ ತುಪ್ಪ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಹಾಲಿನ ಕೊರತೆಯಿದೆ. ಹಾಗಾಗಿ ಹಾಲಿನ ಉತ್ಪನ್ನಗಳ ದರ ಏರಿಸುವುದು ನಮಗೂ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ನಂದಿನಿ ತುಪ್ಪದ ದರ ಕೂಡ ಏರಿಸಲಾಗಿದೆ. ಆಗಸ್ಟ್ 1ರಿಂದ ಹಾಲಿನ ದರ ಹೆಚ್ಚಾಗುವುದರಿಂದ ತುಪ್ಪಕ್ಕೆ ಹೆಚ್ಚಿನ ಬೆಲೆ ಬೇಡಿಕೆ ಇಟ್ಟಿದ್ದೇವೆ. ಕಡಿಮೆ ಬೆಲೆಗೆ ನಂದಿನಿ ತುಪ್ಪ ಮಾರಾಟ ಮಾಡದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.