ನವದೆಹಲಿ: ಲಸಿಕೆಗಳ ಮಿಶ್ರಣ ಇಲ್ಲವೇ ಇಲ್ಲ. ಎಲ್ಲರಿಗೂ 2 ಡೋಸ್ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಸಿಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಲಸಿಕೆಗಳ ಮಿಶ್ರಣದ ಬಗ್ಗೆ ವೈಜ್ಞಾನಿಕ ಪುರಾವೆಗಳು ಸಾಬೀತಾಗುವವರೆಗೆ ಭಾರತದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮಿಶ್ರಣ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.
ಸದ್ಯಕ್ಕಿರುವ ವ್ಯಾಕ್ಸಿನೇಷನ್ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲಾ ಫಲಾನುಭವಿಗಳಿಗೆ 2 ಡೋಸ್ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಹಿರಿಯ ಅಧಿಕಾರಿಗಳು ಇತ್ತೀಚೆಗೆ ನೀಡಿದ ಕೆಲವು ಹೇಳಿಕೆಗಳಿಂದ ಉಂಟಾದ ಆತಂಕಗಳ ಮಧ್ಯೆ ಈ ಸ್ಪಷ್ಟೀಕರಣ ನೀಡಲಾಗಿದೆ.
ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಮತ್ತು ಸರ್ಕಾರದ ಕಾರ್ಯಪಡೆಯ ಪ್ರಮುಖ ಸದಸ್ಯರಾದ ಡಾ. ವಿ.ಕೆ. ಪೌಲ್ ಅವರು ಕೋವಿಶೀಲ್ಡ್, ಕೊವ್ಯಾಕ್ಸಿನ್ ವ್ಯಾಕ್ಸಿನೇಷನ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಅನುಸರಿಸುತ್ತಿರುವ ನಿಯಮದಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಕೋವಿಶೀಲ್ಡ್ ಲಸಿಕೆ ಎರಡು ಡೋಸ್ ನಡುವಿನ ಅಂತರ 12 ವಾರಗಳು, ಕೊವ್ಯಾಕ್ಸಿನ್ ಲಸಿಕೆ 6 ವಾರಗಳ ನಂತರ ನೀಡಲಿದ್ದು, ಈ ವೇಳಾಪಟ್ಟಿಯನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.