ರಾಜ್ಯದ ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠವು ಅಕ್ರಮ ಸಂಬಂಧವನ್ನು ಖಾಸಗಿ ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತುಪಡಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಂತಹ ಪ್ರಕರಣದಲ್ಲಿ ಮಹಿಳೆ ಹಾಗೂ ಪುರುಷನ ಅಕ್ರಮ ಸಂಬಂಧವನ್ನು ಖಾಸಗಿ ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತುಪಡಿಸಲು ಹೋದರೆ ವೈದ್ಯ ಲೋಕವನ್ನು ಇದರ ಮಧ್ಯೆ ತಂದಂತಾಗಿದೆ. ಅಲ್ಲದೇ, ಗೌಪ್ಯ ನಂಬಿಕೆಗಳನ್ನೇ ಹಾಳು ಮಾಡಿದಂತಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಕ್ರಮ ಸಂಬಂಧದ ಕುರಿತು ದಾಖಲಾಗಿದ್ದ ಪ್ರಕರಣವೊಂದರ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ ಈ ತೀರ್ಪು ನೀಡಿದ್ದಾರೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಬೇರೆಯವರೊಂದಿಗೆ ಸಂಬಂಧ ಬೆಳೆಸಿ ಗರ್ಭ ಧರಿಸಿ, ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಗರ್ಭಪಾತಕ್ಕೆ ಸೇರಿದ ದಾಖಲೆಗಳನ್ನು ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದರು.
ಅಲ್ಲದೇ, ವ್ಯಭಿಚಾರದ ಮೂಲಕ ಬೇರೆಯವರೊಂದಿಗೆ ಸಂಸಾರ ನಡೆಸಿ, ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕ್ರೌರ್ಯ ಮೆರೆಯುತ್ತಿದ್ದಾಳೆ ಎಂದು ಆರೋಪಿಸಿದ್ದರು.
ಆದರೆ, ಪತ್ನಿ, ವ್ಯಕ್ತಿಯೊಬ್ಬರಿಗೆ ಸೇರಿದ್ದ ವೈದ್ಯಕೀಯ ದಾಖಲೆಗಳು ಖಾಸಗಿಯಾಗಿ ಇರುತ್ತವೆ. ಅವುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ವಾದ – ವಿವಾದ ಆಲಿಸಿದ ನ್ಯಾಯಮೂರ್ತಿಗಳು, ಸಾರ್ವಜನಿಕ ಹಿತಾಸಕ್ತಿ ಇದ್ದ ಸಂದರ್ಭ ಹಾಗೂ ಬಲವಾದ ಕಾರಣ ಇದ್ದಾಗ ಮಾತ್ರ ಇಂತಹ ದಾಖಲೆಗಳನ್ನು ಬಹಿರಂಗಪಡಿಸುವಂತೆ ಹೇಳುವ ಅಧಿಕಾರ ಇರುತ್ತದೆ. ಆದರೆ, ಎಲ್ಲ ಸಂದರ್ಭಗಳಲ್ಲಿ ದಾಖಲೆಗಳನ್ನು ಸಾರ್ವಜನಿಕ ಬಳಕೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಆದೇಶ ನೀಡಿದ್ದಾರೆ.
ಅಲ್ಲದೇ, ಖಾಸಗಿಯಾಗಿರುವ ವೈದ್ಯಕೀಯ ದಾಖಲೆಗಳನ್ನು ಗುಪ್ತವಾಗಿ ಇಡಲು ವಿಫಲವಾದರೆ, ಮೂಲಭೂತ ಹಕ್ಕು ಉಲ್ಲಂಘಿಸಿದಂತಾಗುತ್ತದೆ. ವ್ಯಭಿಚಾರದ ಆರೋಪಕ್ಕೆ ಕಾನೂನಿಗೆ ತಿಳಿಯುವಂತೆ ಆಧಾರಗಳನ್ನು ನೀಡಬೇಕೆ ವಿನಃ ಖಾಸಗಿ ವೈದ್ಯಕೀಯ ದಾಖಲೆ ಕೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.