ದೇಶದ ನಗರಗಳ ಕೆಲವೊಂದು ಪ್ರದೇಶಗಳಲ್ಲಿ ಮನೆ ಬಾಡಿಗೆ ಕೊಡುವ ಮುನ್ನ ’ಕಡ್ಡಾಯವಾಗಿ ಮಾಂಸಹಾರಿಗಳಿಗೆ ಮನೆ ಕೊಡುವುದಿಲ್ಲ’ ಎಂಬ ಕಟ್ಟುನಿಟ್ಟಿನ ನಿಯಮ ವಿಧಿಸಿರುವುದನ್ನು ಕಂಡಿದ್ದೇವೆ. ಆದರೆ ದೂರದ ನ್ಯೂಯಾರ್ಕ್‌ನಲ್ಲೊಬ್ಬ ಮನೆ ಮಾಲೀಕ ಇಂಥದ್ದೇ ಶರತ್ತನ್ನು ಮನೆ ಬಾಡಿಗೆ ಕೊಡಲು ವಿಧಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಬ್ರೂಕ್ಲಿನ್‌ನಲ್ಲಿ ಕಳೆದ ವಾರ ಪ್ರಕಟಗೊಂಡ ಬಾಡಿಗೆ ಮನೆಗಳ ಪಟ್ಟಿಯೊಂದರಲ್ಲಿ ಹೀಗೂ ಒಂದು ಜಾಹೀರಾತು ಇತ್ತು: ಎರಡು ವಿಶಾಲವಾದ, ಸೂರ್ಯನ ಬೆಳಕು ಬೀಳುವ, ಫುಲ್-ಫ್ಲೋರ್ ಅಪಾರ್ಟ್ಮೆಂಟ್‌ಗಳು ಸುಂದರವಾದ ಹೊರಾಂಗಣದೊಂದಿಗೆ ಫೋರ್ಟ್ ಗ್ರೀನೆಯಲ್ಲಿವೆ ಎಂದು ಹೇಳಲಾದ ಈ ಜಾಹೀರಾತಿನಲ್ಲಿ, ’ಕಟ್ಟಡದೊಳಗೆ ಮಾಂಸ ಅಥವಾ ಮೀನು ತರುವಂತಿಲ್ಲ’ ಎಂದು ಮಾಲೀಕರು ಹಾಕಿರುವ ಶರತ್ತು ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದೆ.
ಮನೆಯ ಮಾಲೀಕರು ಸಸ್ಯಹಾರಿಗಳಾಗಿದ್ದು, ಅವರಿಗೆ ಮಾಂಸಾಹಾರಿಗಳ ವಿರುದ್ಧ ಯಾವುದೇ ವಿರೋಧವಿಲ್ಲ, ಆದರೆ ತಮ್ಮ ಆಸ್ತಿಯಲ್ಲಿ ಬಾಡಿಗೆಗೆ ಇರುವ ವೇಳೆ ಮನೆಯಲ್ಲಿ ಮಾಂಸದಡುಗೆ ಮಾಡುವಂತಿಲ್ಲ ಎಂದು ಶರತ್ತು ವಿಧಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಬ್ರೋಕರ್ ಆಂಡ್ರೆಯಾ ಕೆಲ್ಲಿ ತಿಳಿಸಿದ್ದಾರೆ.