ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಎಲ್ರೂ ಪ್ರತಿದಿನ ತಿಂಡಿ, ಊಟ ಮಾಡೇ ಮಾಡ್ತಾರೆ. ಆದರೆ ಕೆಲವರಿಗೆ ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತ್ರ ಮತ್ತೆ ಹಸಿವಾಗುತ್ತೆ. ಎಷ್ಟೇ ತಿಂದ್ರೂ ಮತ್ತೆ ಹಸಿವಿನಿಂದ ಬಳಲುತ್ತಿದ್ದಾರೆ.
ಪ್ರೋಟೀನ್ ರಹಿತ ಆಹಾರ ಸೇವನೆ ನಿಮ್ಮ ಹಸಿವಿಗೆ ಮುಖ್ಯ ಕಾರಣ. ಪ್ರೋಟೀನ್ ಯುಕ್ತ ಆಹಾರ ಸೇವನೆ ಶುರು ಮಾಡಿ. ಹಾಲು, ಮೊಸರು, ಧಾನ್ಯಗಳು, ಬೀಜಗಳು, ಮಾಂಸ ಮತ್ತು ಮೊಟ್ಟೆಗಳು ಉತ್ತಮ.
ದೇಹ ಮತ್ತು ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾದ್ರೆ ಆಹಾರದ ಜೊತೆ ಉತ್ತಮ ನಿದ್ರೆ ಅಗತ್ಯ. ಸಾಕಷ್ಟು ನಿದ್ದೆ ಮಾಡುವುದರಿಂದ ಹಸಿವು ಹೆಚ್ಚಿಸುವ ಹಾರ್ಮೋನುಗಳು ನಿಯಂತ್ರಣದಲ್ಲಿರುತ್ತವೆ. ನಿದ್ರೆಯ ಕೊರತೆಯು ಹೆಚ್ಚು ಹಸಿವಿಗೆ ಕಾರಣವಾಗುತ್ತದೆ. ಆದ್ದರಿಂದ ಹಸಿವನ್ನು ನಿಯಂತ್ರಣದಲ್ಲಿಡಲು ರಾತ್ರಿ 7-8 ಗಂಟೆಗಳ ಕಾಲ ನಿದ್ರೆ ಮಾಡಿ.
ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ನೀರು ಮೆದುಳು, ಹೃದಯ, ಚರ್ಮ ಮತ್ತು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಊಟಕ್ಕೆ ಮೊದಲು ನೀರು ಕುಡಿಯುವುದರಿಂದ ಯಾವಾಗಲೂ ಹಸಿವು ಕಡಿಮೆಯಾಗುತ್ತದೆ. ಆದ್ದರಿಂದ ನಿಮಗೆ ಹಸಿವಾದಾಗ ನೀರು ಕುಡಿಯಿರಿ.
ಫೈಬರ್ ಭರಿತ ಆಹಾರವು ಜೀರ್ಣಕ್ರಿಯೆ ಸರಿಯಾಗಿ ಇಡುವುದಲ್ಲದೆ ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಹೆಚ್ಚಿನ ಫೈಬರ್ ಆಹಾರಗಳು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇದ್ರಿಂದ ಬೇಗ ಹಸಿವಾಗುವುದಿಲ್ಲ.
ಒತ್ತಡ ಕೂಡ ಹಸಿವು ಹೆಚ್ಚಿಸಬಲ್ಲದು. ನಿಯಮಿತ ವ್ಯಾಯಾಮ ಮತ್ತು ಯೋಗದೊಂದಿಗೆ ಒತ್ತಡ ಕಡಿಮೆ ಮಾಡಿಕೊಳ್ಳಿ.