ಮುಂಬೈ: ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಾ ಕೋವಿಡ್ ನಿರ್ಬಂಧಗಳನ್ನು ಕೈಬಿಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವುದಿಲ್ಲ. ಈ ರೀತಿ ಮಾಸ್ಕ್ ನಿರ್ಬಂಧ ಹಿಂಪಡೆದ ಮೊದಲ ರಾಜ್ಯ ಮಹಾರಾಷ್ಟ್ರ ಆಗಿದೆ.
ರಾಜ್ಯದಲ್ಲಿ ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ನಿರ್ಬಂಧಗಳನ್ನು ತೆರವು ಮಾಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಕುಸಿತ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ
ಮುಂಬೈ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಎರಡು ಬಾರಿ ಲಸಿಕೆ ಪಡೆದುಕೊಂಡಿರಬೇಕು ಎಂಬ ನಿಯಮವನ್ನು ರದ್ದು ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ನಿರ್ಬಂಧ ತೆರವುಗೊಳಿಸಿದ್ದರೂ, ಸಾರ್ವಜನಿಕರು ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಲಸಿಕೆ ಪಡೆಯುವುದನ್ನು ಅನುಸರಿಸಬೇಕೆಂದು ಹೇಳಲಾಗಿದೆ.