ಕೇಂದ್ರ ಸರ್ಕಾರ ಇತ್ತೀಚೆಗೆ ಗೃಹ ಬಳಕೆ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿ ಘೋಷಿಸಿತ್ತು. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರು ಸದ್ಯ ಇಷ್ಟಾದರೂ ರಿಲೀಫ್ ಸಿಗುತ್ತಲ್ಲಾ ಎಂಬ ಸಮಾಧಾನದ ನಿಟ್ಟುಸಿರುಬಿಟ್ಟಿದ್ದರು. ಆದರೆ ಕೇಂದ್ರ ಸರ್ಕಾರ ಈ ಕುರಿತು ಮಾಹಿತಿ ನೀಡಿದ್ದು, ಉಜ್ವಲ ಯೋಜನೆಯಡಿ ಉಚಿತ ಸಂಪರ್ಕ ಪಡೆದ 9 ಕೋಟಿ ಬಡ ಮಹಿಳೆಯರು ಮತ್ತು ಇತರ ಫಲಾನುಭವಿಗಳು ಮಾತ್ರ ಸಬ್ಸಿಡಿ ಪಡೆಯುತ್ತಾರೆ ಇತರೆ ಬಳಕೆದಾರರು ಮಾರುಕಟ್ಟೆ ಬೆಲೆಯನ್ನೇ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ 14.2 ಕೆಜಿ LPG ಸಿಲಿಂಡರ್ ಬೆಲೆ 1,003 ರೂ. ಗಳಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ರೂ. 200 ಸಬ್ಸಿಡಿಯನ್ನು ಪಡೆಯಲಿದ್ದಾರೆ. ಇದರಿಂದಾಗಿ ಅವರಿಗೆ 14.2 ಕೆಜಿ ಸಿಲಿಂಡರ್ 803 ರೂಪಾಯಿಗಳಿಗೆ ಲಭ್ಯವಾಗುತ್ತದೆ. ಇನ್ನುಳಿದ ಬಳಕೆದಾರರು ಮಾರುಕಟ್ಟೆ ದರ 1,003 ರೂ. ಪಾವತಿಸಬೇಕಾಗುತ್ತದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನೀಡುವ 200 ರೂ. ಸಬ್ಸಿಡಿಯಿಂದ ಸರ್ಕಾರಕ್ಕೆ 6,100 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ.
ದೇಶದಲ್ಲಿ ಸುಮಾರು 30.5 ಕೋಟಿ LPG ಸಂಪರ್ಕಗಳಿದ್ದು, ಈ ಪೈಕಿ 9 ಕೋಟಿಯನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ನೀಡಲಾಗಿದೆ. ಈಗಾಗಲೇ ಪೆಟ್ರೋಲ್ – ಡಿಸೇಲ್ ಬೆಲೆ ಗಗನಕ್ಕೇರಿರುವುದರಿಂದ ದಿನಬಳಕೆ ವಸ್ತುಗಳೂ ದುಬಾರಿಯಾಗಿವೆ. ಸಿಲಿಂಡರ್ ದರ ಕೂಡಾ ಏರುಮುಖ ಮಾಡಿದ್ದು, ಜನ ಸಾಮಾನ್ಯರು ಸಂಕಷ್ಟವನ್ನು ಎದುರಿಸುವಂತಾಗಿದೆ.