ತಮ್ಮ ವೀಸಾ ರದ್ದು ಮಾಡಿದ್ದನ್ನು ಪ್ರಶ್ನಿಸಿ ಆಸ್ಟ್ರೇಲಿಯಾದ ಕೋರ್ಟ್ ಒಂದರಲ್ಲಿ ದಾವೆ ಹೂಡಿದ್ದ ವಿಶ್ವದ ನಂ1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ತಕ್ಷಣದ ಮಟ್ಟಿಗೆ ಗಡೀಪಾರಾಗುವುದರಿಂದ ಪಾರಾಗಿದ್ದಾರೆ. ಕಡೇ ಪಕ್ಷ ಸೋಮವಾರದವರೆಗೂ ನೊವಾಕ್ ಜೊಕೊವಿಕ್ ರನ್ನು ಗಡೀಪಾರು ಮಾಡದಂತೆ ತಡೆಯಾಜ್ಞೆ ಕೊಟ್ಟಿದ್ದು, ಪ್ರಕರಣದ ಆಲಿಕೆಯ ಮುಂದುವರಿಕೆಯನ್ನು ಆ ದಿನ ಇಟ್ಟುಕೊಳ್ಳಲಾಗಿದೆ.
ಮೆಲ್ಬರ್ನ್ ವಿಮಾನ ನಿಲ್ದಾಣದ ಗಡಿ ಅಧಿಕಾರಿಗಳಲ್ಲಿ ತಮ್ಮ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ವಿಫಲವಾಗಿ ಎಂಟು ಗಂಟೆಗಳ ಕಾಲ ಬಂಧಿಯಾಗಿರಬೇಕಾಗಿ ಬಂದಿದ್ದ ನೊವಾಕ್ ಜೊಕೊವಿಕ್, ಕೋರ್ಟ್‌ನಲ್ಲಿ ಕೇಸ್ ಗೆದ್ದ ಪರಿಣಾಮ ಮೆಲ್ಬರ್ನ್‌ನಲ್ಲಿ ಉಳಿದುಕೊಳ್ಳಬಹುದಾಗಿದೆ.
ಮನೆಯಲ್ಲೇ ತಯಾರಿಸಿ ಹರ್ಬಲ್ ಸೋಪ್
ಸರ್ಬಿಯಾದ ಚಾಂಪಿಯನ್ ಆಟಗಾರನ ವೀಸಾ ರದ್ದಾದ ಬಳಿಕ ಆತನನ್ನು ಇಲ್ಲಿನ ಕಾರ್ಲ್ಟನ್‌ನ ಪಾರ್ಕ್ ಹೊಟೇಲ್‌ನಲ್ಲಿ ವಲಸೆ ಬಂಧನದಲ್ಲಿರಿಸಲಾಗಿತ್ತು. ಜೊಕೊವಿಕ್ ಪರ ವಕೀಲರು ಆನ್ಲೈನ್ ಮೂಲಕ ಕೋರ್ಟ್ ಮುಂದೆ ತಮ್ಮ ವಾದ ಪ್ರಸ್ತುತಪಡಿಸಿದ್ದಾರೆ.
ಮಾರ್ಗಸೂಚಿಗಳ ಪ್ರಕಾರ, ಕೋವಿಡ್-19 ಲಸಿಕೆ ಪಡೆಯದ ಮಂದಿ ವಿಮಾನ ನಿಲ್ದಾಣಗಳ ಗಡಿ ಅಧಿಕಾರಿಗಳ ಎದುರು ಸೂಕ್ಷ ಸಾಕ್ಷ್ಯಗಳನ್ನು ಪ್ರಸ್ತುತ ಪಡಿಸಬೇಕು. ಗುರುವಾರದಂದು ಜೊಕೊವಿಕ್ ರ ವೀಸಾವನ್ನು ಆಸ್ಟ್ರೇಲಿಯಾ ರದ್ದು ಮಾಡಿತ್ತು.
ಇದಕ್ಕೂ ಮುನ್ನ, ಆಸ್ಟ್ರೇಲಿಯಾದಲ್ಲಿ ಬಂದಿಳಿದ ಜೊಕೊವಿಕ್, ಕೋವಿಡ್ ಲಸಿಕೆ ಪಡೆಯುವ ವಿಚಾರವಾಗಿ ವೈದ್ಯಕೀಯ ಸಡಿಲಿಕೆಯ ನೆಪವೊಂದನ್ನು ಹೇಳಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಆದರೆ ಜೊಕೊವಿಕ್ ತಾವು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿರುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ಈ ಬಗ್ಗೆ ಏಪ್ರಿಲ್ 2020ರಲ್ಲಿ ಹೇಳಿಕೆಯೊಂದನ್ನು ಕೊಟ್ಟಿದ್ದ ಜೊಕೊವಿಕ್, “ವೈಯಕ್ತಿಕವಾಗಿ ನಾನು ಪ್ರಯಾಣ ಮಾಡಬೇಕಾದರೆ ಕೋವಿಡ್-19 ಲಸಿಕೆ ಬೇಕೆಂಬುದನ್ನು ವಿರೋಧಿಸುತ್ತೇನೆ. ಆದರೆ ಇದು ಕಡ್ಡಾಯವಾದಲ್ಲಿ, ಲಸಿಕೆ ಪಡೆಯಬೇಕೋ ಬೇಡವೋ ಎಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ,” ಎಂದು ಹೇಳಿದ್ದರು.
ಇದಾದ ಎರಡು ತಿಂಗಳಲ್ಲಿ, ಜೊಕೊವಿಕ್ ಮತ್ತವರ ಪತ್ನಿ ಕೋವಿಡ್ ಪಾಸಿಟವ್ ಆಗಿದ್ದರು. ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಧಾರಣೆ ಇಲ್ಲದೇ ಒಂದಷ್ಟು ಪ್ರದರ್ಶನ ಪಂದ್ಯಗಳನ್ನು ಆಯೋಜಿಸಿದ್ದ ಬೆನ್ನಿಗೇ ಜೊಕೊವಿಕ್ ಕೋವಿಡ್ ಪಾಸಿಟಿವ್ ಆಗಿದ್ದರು.
ಆಸ್ಟ್ರೇಲಿಯನ್ ಓಪನ್ ಆಯೋಜಿಸಲಾಗುವ ಮೆಲ್ಬರ್ನ್ ಪಾರ್ಕ್ ಇರುವ ವಿಕ್ಟೋರಿಯಾ ರಾಜ್ಯದ ಸರ್ಕಾರವು ಆಟದ ಅಂಗಳ ಪ್ರವೇಶಿಸಬೇಕಾದಲ್ಲಿ ಎಲ್ಲಾ ಆಟಗಾರರು, ಸಿಬ್ಬಂದಿ ಮತ್ತು ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಮೆಲ್ಬರ್ನ್‌ನಲ್ಲಿ ಬಂದಿಳಿದ ಬಳಿಕ ಅಗತ್ಯವಾಗಿರುವ ಆರೋಗ್ಯ ಸಂಬಂಧಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸದ ಕಾರಣ ಜೊಕೊವಿಕ್ ರ ವೀಸಾ ರದ್ದು ಮಾಡಿರುವುದಾಗಿ ಆಸ್ಟ್ರೇಲಿಯಾ ಗಡಿ ಪಡೆ ತಿಳಿಸಿದೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, “ನಿಯಮಗಳಿಗಿಂತ ಯಾರೂ ದೊಡ್ಡವರಲ್ಲ. ನಮ್ಮ ಗಡಿಗಳ ಸಂಬಂಧ ನಿಯಮಗಳಲ್ಲಂತೂ ಇದು ಇನ್ನಷ್ಟು ಕಠಿಣ. ಜೊಕೊವಿಕ್ ರ ವೀಸಾ ರದ್ದು ಮಾಡಲಾಗಿದೆ. ಬಲಿಷ್ಠವಾದ ಗಡಿ ನಿಮಯಗಳ ಕಾರಣದಿಂದಾಗಿಯೇ ಆಸ್ಟ್ರೇಲಿಯಾದಲ್ಲಿ ಕೋವಿಡ್ ಸಂಬಂಧ ಸಾವುಗಳ ಪ್ರಮಾಣ ಜಗತ್ತಿನಲ್ಲೇ ಅತ್ಯಂತ ಕಡಿಮೆ ಇರುವ ಪೈಕಿಯಲ್ಲಿ ಒಂದಾಗಿದೆ,’’ ಎಂದಿದ್ದಾರೆ.
ವೃತ್ತಿ ಜೀವನದಲ್ಲಿ 20 ಗ್ರಾನ್ ಸ್ಲಾಂಗಳನ್ನು ಗೆದ್ದಿರುವ 34-ವರ್ಷದ ಜೊಕೊವಿಕ್, ಇನ್ನೊಂದು ಮುಕುಟ ಜಯಿಸಿ ಟೆನಿಸ್ ಅಂಗಳದ ಎದುರಾಳಿಗಳಾದ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್‌ರ ದಾಖಲೆಯನ್ನು ಹಿಂದಿಕ್ಕುವುದನ್ನು ಎದುರು ನೋಡುತ್ತಿದ್ದು ಆಸ್ಟ್ರೇಲಿಯಾ ಓಪನ್‌ನಲ್ಲೇ 9 ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ.