
ನವದೆಹಲಿ: ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲಾ 7 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಹೇಳಿದೆ.
ಆಮ್ ಆದ್ಮಿ ಪಕ್ಷ(ಎಎಪಿ)ದೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ, ಇದು ರಾಷ್ಟ್ರ ರಾಜಧಾನಿಯಲ್ಲಿ I.N.D.I.A ಮೈತ್ರಿಯ ಏಕತೆಗೆ ಹಿನ್ನಡೆಯಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಅದರ ದೆಹಲಿ ಘಟಕದ ನಡುವಿನ ಸಭೆ ನಡೆದ ನಂತರ ಈ ಬೆಳವಣಿಗೆ ನಡೆದಿದೆ.
ಸಭೆಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ. ವೇಣುಗೋಪಾಲ್, ದೆಹಲಿ ಘಟಕದ ಮುಖ್ಯಸ್ಥ ಚೌಧರಿ ಅನಿಲ್ ಕುಮಾರ್, ಉಸ್ತುವಾರಿ ದೀಪಕ್ ಬಬಾರಿಯಾ, ಅಲ್ಕಾ ಲಂಬಾ, ಹರೂನ್ ಯೂಸುಫ್, ಅಜಯ್ ಮಾಕನ್ ಮತ್ತು ಹಲವರು ಉಪಸ್ಥಿತರಿದ್ದರು.
ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವಂತೆ ತಿಳಿಸಲಾಗಿದೆ. ಎಲ್ಲಾ 7 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. 7 ತಿಂಗಳುಗಳು ಉಳಿದಿವೆ. ಎಲ್ಲಾ ಸ್ಥಾನಗಳಿಗೆ ಸಿದ್ಧರಾಗಲು ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ತಿಳಿಸಿದ್ದಾರೆ.
ಸಭೆಯಲ್ಲಿ ಎಎಪಿ ಜೊತೆ ಮೈತ್ರಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಉಸ್ತುವಾರಿ ದೀಪಕ್ ಬಬಾರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಲೋಕಸಭೆ ಚುನಾವಣೆಗೆ ತಯಾರಿ ನಡೆಸುವ ದೃಷ್ಟಿಯಿಂದ ದೆಹಲಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಚರ್ಚಿಸಲಾಗಿದೆ. ಎಲ್ಲ 7 ಸಂಸದೀಯ ಸ್ಥಾನಗಳಿಗೆ ಸಿದ್ಧತೆ ಆರಂಭಿಸುವಂತೆ ನಾಯಕತ್ವ ಕೇಳಿಕೊಂಡಿದೆ ಎಂದರು.
ಆಮ್ ಆದ್ಮಿ ಪಕ್ಷ ಪ್ರತಿಕ್ರಿಯೆ
ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಐಎನ್‌ಡಿಐಎ ಮೈತ್ರಿಕೂಟದ ಸದಸ್ಯ ಆಮ್ ಆದ್ಮಿ ಪಾರ್ಟಿ(ಎಎಪಿ), ಮುಂದಿನ ವರ್ಷ ದೆಹಲಿಯಲ್ಲಿ ಏಕಾಂಗಿಯಾಗಿ ಹೋಗಲು ಕಾಂಗ್ರೆಸ್ ನಿರ್ಧರಿಸಿದ್ದರೆ, ಅವರು ಐಎನ್‌ಡಿಐಎ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.