ಉದಯಪುರ: ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗಿದೆ. ಅಲೋದ್ ಗ್ರಾಮದಲ್ಲಿ ತಾಯಿ, ಮಗನ ಜೋಡಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಘಟನೆ ಸಮಾಜದ ಭೀಕರ ವಾಸ್ತವತೆ ಮತ್ತು ಜಾತಿವಾದ ಹೇಗಿದೆ ಎಂಬುದನ್ನು ಬಿಂಬಿಸಿದೆ. ಆರೋಪಿ ಮತ್ತು ಮಹಿಳೆ ನೆರೆಹೊರೆಯವರಾಗಿದ್ದು ಕೆಲವು ದಿನಗಳ ಹಿಂದೆ ಜಗಳವಾಡಿದ್ದರು. ಮಹಿಳೆಯನ್ನು ಅವಮಾನಿಸಿ ಹಲ್ಲೆ ಮಾಡಲಾಗಿತ್ತು.
ಜನವರಿ 28 ರಂದು ಆರೋಪಿ ಮೋಟಾರ್ ಬೈಕ್ ನಲ್ಲಿ ಬಂದಾಗ ಮಹಿಳೆ ಹ್ಯಾಂಡ್ ಪಂಪ್ ಸಮೀಪ ಬಟ್ಟೆ ಒಗೆಯುತ್ತಿದ್ದರು. ಆಕೆಯ ಲೆಹಂಗಾ ಎಳೆದ ಆರೋಪಿ ತೊಡೆ ಮತ್ತು ಖಾಸಗಿ ಭಾಗಗಳಿಗೆ ಹೊಡೆದಿದ್ದಾನೆ. ತೀವ್ರ ಹಲ್ಲೆಯಿಂದ ಮಹಿಳೆ ಗಾಯಗೊಂಡಿದ್ದಾಳೆ. ಆರೋಪಿಯ ಕೃತ್ಯಕ್ಕೆ ಆತನ ತಾಯಿ ಕೂಡ ಸಾಥ್ ನೀಡಿದ್ದಾರೆ. ಘಟನೆ ನಡೆಯುವಾಗ ಗ್ರಾಮಸ್ಥರು ಸೈಲೆಂಟಾಗಿ ಬಾಯಿ ಮುಚ್ಚಿಕೊಂಡಿದ್ದರು.
ಹಲ್ಲೆ ನಡೆಸಿದ ಆರೋಪಿಯನ್ನು ಕಿಶನ್ ತೇಲಿ ಎಂದು ಗುರುತಿಸಲಾಗಿದೆ. ಆತನ ತಾಯಿ ಚಂಡಿ ಬಾಯಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬೈಕ್ ಚೈನ್ ನಿಂದಲೂ ಆರೋಪಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿದ್ದರು.
ಇದೇ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತಿ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದಾಗ ಆತನ ಪತ್ನಿ ಪ್ರಜ್ಞಾಹೀನಳಾಗಿ ಬಿದ್ದಿರುವುದು ಕಂಡುಬಂದಿದೆ. ನಂತರದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರಿಗೆ ಅದೇ ದಿನ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.