ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ‘ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿದ್ದು, ಈ ಪೈಕಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮೊದಲಾದವು ಸೇರಿವೆ. ಅಲ್ಲದೆ ಈ ಸಂಬಂಧ ಕಾಂಗ್ರೆಸ್ ಮನೆಮನೆಗೆ ಗ್ಯಾರಂಟಿ ಕಾರ್ಡ್ ವಿತರಿಸಿತ್ತು.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಹಾಗೂ ಪೂರ್ಣಪ್ರಮಾಣದ ಸಚಿವ ಸಂಪುಟ ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದೆ. ಈ ಮೊದಲು ನಡೆದಿದ್ದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಕಾಂಗ್ರೆಸ್ ‘ಗ್ಯಾರಂಟಿ’ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಮುಂದಿನ ಮೀಟಿಂಗ್ ನಲ್ಲಿ ಅನುಷ್ಠಾನದ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಇದರ ಮಧ್ಯೆ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕುರಿತಂತೆ ಅಲ್ಲಲ್ಲಿ ಜಟಾಪಟಿ ನಡೆದಿದ್ದು, ಇದೀಗ ದಾವಣಗೆರೆ ತಾಲೂಕಿನ ಗೋಣಿವಾಡ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಮಟೆ ಬಾರಿಸುತ್ತ ‘ಇವತ್ತಿನಿಂದ ಯಾರು ಕರೆಂಟ್ ಬಿಲ್ ಕಟ್ಟಂಗಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆರ್ಡರ್ ಮಾಡಿ ಕಳುಹಿಸಿದ್ದಾರೆ’ ಎಂದು ಸಾರಿದ್ದಾನೆ.
ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾಲೂಕು ಆಡಳಿತದ ಗಮನಕ್ಕೂ ಬಂದಿದೆ. ಈ ಕುರಿತಂತೆ ಮಾತನಾಡಿರುವ ತಹಶೀಲ್ದಾರ್ ಎಂ.ಬಿ. ಅಶ್ವಥ್, ಈ ವ್ಯಕ್ತಿ ಯಾರು ಹಾಗೂ ಯಾವ ಕಾರಣಕ್ಕೆ ಈ ರೀತಿ ಡಂಗೂರ ಸಾರಿದ್ದಾನೆ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.