ಉತ್ತರ ಕರ್ನಾಟಕದವರೇ ರಾಜ್ಯದ ಮುಂದಿನ ಸಿಎಂ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಭರ್ತಿಯಾಗಿದೆ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
ಧಾರವಾಡದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಯಡಿಯೂರಪ್ಪನವರೇ ಸಿಎಂ ಆಗಿರೋದ್ರಿಂದ ಈ ಸ್ಥಾನ ಭರ್ತಿಯಾಗಿದೆ. ಅವರೇ ನಮ್ಮ ಸಿಎಂ ಆಗಿ ಮುಂದುವರಿಯುತ್ತಾರೆ.
ಹೀಗಾಗಿ ಅವರು, ಇವರು ಸಿಎಂ ಆಗ್ತಾರೆ ಎಂಬ ಪ್ರಶ್ನೆಯೇ ಉದ್ಭವವಾಗೋದಿಲ್ಲ .ಸಿಎಂ ಬದಲಾವಣೆ ಮಾಡುವ ಬಗ್ಗೆ ಎಲ್ಲಿಯೂ ಚರ್ಚೆ ಕೂಡ ಆಗಿಲ್ಲ. ನಮ್ಮಲ್ಲಿ ಸಂಪೂರ್ಣ ಒಗ್ಗಟ್ಟು ಇದೆ. ದೆಹಲಿ ನಮ್ಮ ದೇಶದ ರಾಜಧಾನಿ. ನಮ್ಮ ಪಕ್ಷದ ಕೇಂದ್ರ ಕಚೇರಿ ಕೂಡ ದೆಹಲಿಯಲ್ಲಿದೆ. ಹೀಗಾಗಿ ಎಲ್ಲಿ ಬೇಕಾದರೂ ಹೋಗಿ ಯಾರನ್ನಾದರೂ ಮಾತನಾಡಿಸಿ ಬರಬಹುದು ಅದಕ್ಕೂ ಸಿಎಂ ಸ್ಥಾನ ಬದಲಾವಣೆಗೂ ಸಂಬಂಧ ಇಲ್ಲ ಎಂದು ಹೇಳಿದ್ರು.
ಹೆಚ್ಡಿಕೆ ಹಾಗೂ ಸುಮಲತಾ ಮಧ್ಯೆ ನಡೆಯುತ್ತಿರುವ ಕನ್ನಂಬಾಡಿ ಕಾಳಗ ವಿಚಾರವಾಗಿಯೂ ಮಾತನಾಡಿದ ಅವ್ರು, ಇದು ಈಗಾಗಲೇ ಮುಗಿದು ಹೋಗಿರುವ ಅಧ್ಯಾಯ. ಅವರಿಬ್ಬರ ನಡುವೆ ಮಾತಿನ ಯುದ್ಧ ಮುಗಿದು ಹೋಗಿದೆ. ಕೆಆರ್ಎಸ್ನಲ್ಲಿ ಯಾವುದೇ ಬಿರುಕಿಲ್ಲ ಎಂದು ವರದಿ ಹೇಳಿದೆ. ಅಂತಹ ಯಾವುದೇ ಸಂದರ್ಭ ಬಂದರೆ ಸರ್ಕಾರ ಅದರ ಬಗ್ಗೆ ಗಮನಹರಿಸಲಿದೆ ಎಂದು ಹೇಳಿದ್ರು.