ಕೋವಿಡ್-19 ಲಸಿಕೆ ಪಡೆದ ಮೇಲೂ ಸೋಂಕುಪೀಡಿತರಾದ ಮಂದಿಯಲ್ಲಿ ಯಾವುದೇ ಸಾವು ಸಂಭವಿಸಿದ ವರದಿಗಳಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ದೆಹಲಿಯ ಅಧ್ಯಯನ ವರದಿಯೊಂದು ತಿಳಿಸಿದೆ.
ಲಸಿಕೆ ಪಡೆದ ಬಳಿಕವೂ ಕೋವಿಡ್ ಸೋಂಕು ತಗುಲಿರುವ ಅನೇಕ ನಿದರ್ಶನಗಳ ಬಗ್ಗೆ ವರದಿಯಾಗಿದ್ದರೂ ಸಹ ಇವೆಲ್ಲಾ ಗಂಭೀರವಲ್ಲದ ರೋಗಲಕ್ಷಣಗಳನ್ನು ಹೊಂದಿರುವ ಪ್ರಕರಣಗಳಾಗಿವೆ. ಈ ಸಂಬಂಧ ನಡೆಸಿದ ಜೀನೋಮ್ ಅಧ್ಯಯನದಿಂದ ಈ ವಿಚಾರ ತಿಳಿದುಬಂದಿದೆ.
ಅಧ್ಯಯನ ನಡೆಸಿದ 63 ಮಂದಿಯ ಪೈಕಿ 36 ಮಂದಿ ಎರಡೂ ಲಸಿಕೆ ಪಡೆದಿದ್ದು, 27 ಮಂದಿ ಕನಿಷ್ಠ ಒಂದು ಡೋಸ್ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಇವರ ಪೈಕಿ 10 ಮಂದಿಗೆ ಕೋವಿಶೀಲ್ಡ್ ಹಾಕಿದ್ದರೆ 53 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ರೋಗಿಗಳ ಸರಾಸರಿ ವಯೋಮಾನ 37 ಇದ್ದು, ಇವರ ಪೈಕಿ 41 ಮಂದಿ ಪುರುಷರು ಹಾಗೂ 22 ಮಂದಿ ಮಹಿಳೆಯರಾಗಿದ್ದಾರೆ.