ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ಬೆದರಿಕೆ ಮಧ್ಯೆ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಖುಷಿ ಸುದ್ದಿಯನ್ನು ನೀಡಿದ್ದಾರೆ. ಕೊರೊನಾ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನಲು ಯಾವುದೇ ಡೇಟಾ ಇಲ್ಲ. ಭವಿಷ್ಯದಲ್ಲಿ ಮಕ್ಕಳು ಗಂಭೀರ ಸೋಂಕಿಗೆ ಒಳಗಾಗ್ತಾರೆಂಬ ಆತಂಕವನ್ನೂ ಅವರು ತಳ್ಳಿ ಹಾಕಿದ್ದಾರೆ.
ಆರೋಗ್ಯ ಸಚಿವಾಲಯದ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏಮ್ಸ್ ನಿರ್ದೇಶಕರು, ಯಾವುದೇ ಜಾಗತಿಕ ಮತ್ತು ಭಾರತೀಯ ದತ್ತಾಂಶಗಳಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರಿದೆ ಎಂಬುದು ಕಂಡು ಬಂದಿಲ್ಲ. ಎರಡನೇ ತರಂಗದಲ್ಲಿಯೂ ಸೋಂಕಿಗೆ ಒಳಗಾದ ಮಕ್ಕಳು ಸೋಂಕಿನ ಸೌಮ್ಯ ಲಕ್ಷಣ ಹೊಂದಿದ್ದರು ಎಂದಿದ್ದಾರೆ. ಭವಿಷ್ಯದಲ್ಲಿ ಮಕ್ಕಳಲ್ಲಿ ಗಂಭೀರವಾದ ಸೋಂಕು ಕಾಡಲಿದೆ ಎಂಬುದನ್ನು ನಾನು ನಂಬುವುದಿಲ್ಲ ಎಂದಿದ್ದಾರೆ.
ಭಾರತದ ಕೊರೊನಾ ವೈರಸ್‌ನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುವಾಗ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 89,498 ಹೊಸ ಪ್ರಕರಣಗಳು ವರದಿಯಾಗಿವೆ ಎಂದಿದ್ದಾರೆ. ಪ್ರಕರಣಗಳಲ್ಲಿ ಶೇಕಡಾ 79 ರಷ್ಟು ಇಳಿಕೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.