ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಲಾಗಿದೆ.
ಕಲಾಪ ಆರಂಭವಾಗುತ್ತಿದ್ದಂತೆ ಏಪ್ರಿಲ್ 3 ಕ್ಕೆ ಪಾಕಿಸ್ತಾನ ಸಂಸತ್ ಕಲಾಪ ಮುಂದೂಡಲಾಗಿದೆ. ಅಂದು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಇಮ್ರಾನ್ ಖಾನ್ ಗೆ ಏ. 3 ರವರೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆದರೆ, ಇಮ್ರಾನ್ ಖಾನ್ ಅವರು ಸರ್ಕಾರ ವಿಸರ್ಜನೆಗೆ ಮುಂದಾಗಿದ್ದಾರೆ. ಪದಚ್ಯುತಿಗೆ ಹೆದರಿ ಸರ್ಕಾರ ವಿಸರ್ಜನೆಗೆ ಇಮ್ರಾನ್ ಖಾನ್ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಹಿಂತೆಗೆದುಕೊಳ್ಳುವ ಷರತ್ತಿನ ಮೇಲೆ ಅಸೆಂಬ್ಲಿ ವಿಸರ್ಜಿಸಲು ಮುಂದಾಗಿದ್ದಾರೆ. ಪ್ರತಿಪಕ್ಷಗಳು ತಮ್ಮ ಸಲಹೆಯನ್ನು ಒಪ್ಪದಿದ್ದರೆ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.